

ಮಧುಗಿರಿ: ಅಕ್ಷರ ಜ್ಞಾನವಿಲ್ಲದ ಗ್ರಾಮೀಣ ಹೆಣ್ಣು ಮಕ್ಕಳಿಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವ್ಯವಹಾರ ಜ್ಞಾನ ಕಲಿಸುತ್ತಿದ್ದು, ಈ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಡಿ.ಸಿ.ಟ್ರಸ್ಟ್, ತುಮಕೂರು ಜಿಲ್ಲೆ-2 ವತಿಯಿಂದ ಆಯೋಜಿಸಿದ್ದ ಸ್ವ-ಉದ್ಯೋಗ ಮೇಳ ಮತ್ತು ಸಾಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ದೈನಂದಿನ ಜೀವನದಲ್ಲಿ ಯಾರು ತಮ್ಮ ಕೆಲಸದಲ್ಲಿ ದೇವರನ್ನು ಸ್ಮರಿಸುತ್ತಾರೋ ಅಂತಹವರಿಗೆ ಭಗವಂತನ ಆಶೀರ್ವಾದ ಸದಾ ದೊರೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮಾಂತರ ಪ್ರದೇಶದ ದುರ್ಬಲರ ಏಳಿಗೆಗೆ ದುಡಿಮೆಯ ಪ್ರಯೋಜನದ ಜತೆಗೆ ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಉದ್ದೇಶವನ್ನು ಗ್ರಾಮಾಭಿವೃದ್ಧಿ ಯೋಜನೆ ಹೊಂದಿದ್ದು, ಸುಸ್ಥಿರ ಸಮಾಜ ನಿರ್ಮಾಣ ನಮ್ಮ ಗುರಿ ಎಂದರು.
ದುಡಿಮೆಯ ಸಂಪತ್ತು ಹಾಳಾಗಬಾರದು ಎಂಬ ಉದ್ದೇಶದಿಂದ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಸಂಸಾರದಲ್ಲಿ ಎಲ್ಲರೂ ದುಡಿದಾಗ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರದ್ದೂ ಎಂಬುದು ಸಂಸ್ಥೆಯ ಉದ್ದೇಶವಾಗಿದೆ. ಸ್ವ-ಸಹಾಯ ಸಂಘ ಎಂದರೆ ನಮಗೆ ನಾವೇ ಸಹಾಯ ಮಾಡಿಕೊಳ್ಳುವುದು ಎಂದರ್ಥ ಎಂದ ಅವರು, ಸರ್ಕಾರದ ಎಲ್ಲ ಯೋಜನೆಗಳು ಜನಸಾಮಾನ್ಯರಿಗೆ ದೊರೆಯಬೇಕೆಂಬ ಉದ್ದೇಶದಿಂದ 326 ಸೇವಾ ಕೇಂದ್ರಗಳನ್ನು ತೆರೆದು ಸರ್ಕಾರದ ಎಲ್ಲ ಮಾಹಿತಿ ನೀಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ 30,000ಕ್ಕೂ ಅಧಿಕ ಕ್ರಿಯಾಶೀಲ ಸಂಘಗಳಿದ್ದು, 267 ಕೋಟಿ ರೂಪಾಯಿ ಉಳಿತಾಯ ಮಾಡಲಾಗಿದೆ. 1400 ಕೋಟಿ ವ್ಯವಹಾರ ಮಾಡಲಾಗಿದ್ದು, ಇದರ ಉದ್ದೇಶ ಮಹಿಳೆಯರು ಸಬಲೀಕರಣವಾಗಬೇಕು ಎಂಬುದಾಗಿದೆ ಎಂದರು.
ಮೋದಿಯವರೂ ಮೆಚ್ಚಿದ್ದಾರೆ…
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ರಾಜ್ಯಾದ್ಯಂತ 400ಕ್ಕೂ ಅಧಿಕ ಕೆರೆಗಳನ್ನು ಅಭಿವೃದ್ಧಿಪಡಿಸಿದ್ದು, ಇದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ. ಸರ್ಕಾರದಿಂದ ಯಾವುದಾದರೂ ಅಭಿವೃದ್ಧಿ ಕಾರ್ಯಕ್ಕೆ 25 ಲಕ್ಷ ಬಿಡುಗಡೆಯಾದರೆ ಕೇವಲ 10 ಲಕ್ಷ ರೂಪಾಯಿ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗವಾಗುತ್ತದೆ. ಅದರೆ ಧರ್ಮಸ್ಥಳ ಸಂಸ್ಥೆ ವತಿಯಿಂದ 25 ಲಕ್ಷ ಬಿಡುಗಡೆಯಾದರೆ 50ಲಕ್ಷ ರೂಪಾಯಿ ಅಭಿವೃದ್ಧಿ ಕೆಲಸವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳ ಜತೆ ಧರ್ಮಸ್ಥಳ ಸಂಸ್ಥೆಯೂ ಕೈ ಜೋಡಿಸಿದರೆ ಬಹಳಷ್ಟು ಉಪಯುಕ್ತವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಮನವಿ ಮಾಡಿದ್ದರು ಎಂದರು.
ಪೂರ್ಣ ಕುಂಭ ಸ್ವಾಗತ
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಶಕ್ತಿದೇವತೆ ಶ್ರೀದಂಡಿನ ಮಾರಮ್ಮ ದೇವಸ್ಥಾನದಿಂದ ರಾಜೀವ್ ಗಾಂಧಿ ಕ್ರೀಡಾಂಗಣದವರೆಗೂ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಜಾನಪದ ಕಲಾತಂಡಗಳು, ಗಟ್ಟಿಮೇಳ ಹಾಗೂ ಪೂರ್ಣ ಕುಂಭದೊಂದಿಗೆ ಮೆರವಣೆಗೆಯಲ್ಲಿ ಕರೆತರಲಾಯಿತು. ವಿಧಾನ ಪರಿಷತ್ ಸದಸ್ಯರಾದ ಆರ್.ರಾಜೇಂದ್ರ, ಎಂ.ಚಿದಾನಂದಗೌಡ, ಪುರಸಭೆ ಅಧ್ಯಕ್ಷ ತಿಮ್ಮರಾಜು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಮನೋಹರ್, ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಮಚಂದ್ರ ಗುಪ್ತ, ಜಿಲ್ಲಾ ನಿರ್ದೇಶಕ ದಿನೇಶ್, ಯೋಜನಾಧಿಕಾರಿ ದಿನೇಶ್‌ಕುಮಾರ್, ಚಿತ್ರದುರ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹನುಮಂತೇಗೌಡ, ಜನಮುಖಿ ಸಂಸ್ಥೆ ಅಧ್ಯಕ್ಷ ಎಲ್.ಸಿ.ನಾಗರಾಜು ಇದ್ದರು.
ಹೆಗ್ಗಡೆಯವರಿಗೆ ನೊಬೆಲ್ ಪ್ರಶಸ್ತಿ ನೀಡಿ
1982ರಲ್ಲಿ ಧರ್ಮಸ್ಥಳದಲ್ಲಿ ಕೇವಲ ಎರಡು ಹಳ್ಳಿಗಳಿಂದ ಪ್ರಾರಂಭವಾದ ಸಣ್ಣ ಪ್ರಯತ್ನ ಇಂದು ಆಂದೋಲನ ರೂಪ ತಾಳಿದೆ. ಇಂದು 611956 ಸಂಘಗಳಿದ್ದು, 49 ಲಕ್ಷ ಸದಸ್ಯರಿದ್ದಾರೆ. 2700 ಕೋಟಿ ರೂ. ಸಂಗ್ರಹಿಸಿ ಮತ್ತೆ ಜನರ ಏಳಿಗೆಗೆ ವಿನಿಯೋಗಿಸುತ್ತಿದ್ದು ಇದು ದೇಶದ ಯಾವುದೇ ರಾಜ್ಯದಲ್ಲೂ ಕಾಣಲು ಸಾಧ್ಯವಿಲ್ಲ. ರಾಜ್ಯದಲ್ಲಿ 6.5 ಕೋಟಿ ರೂಪಾಯಿ ಜನಸಂಖ್ಯೆ ಇದ್ದು, ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಮೂಲಕ 2.5 ಕೋಟಿ ಜನರ ಮನಸ್ಸು ಗೆದ್ದಿದ್ದಾರೆ. ಪೂಜ್ಯರ ಸೇವೆ ಗುರುತಿಸಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಶಾಸಕ ಡಾ.ಜಿ.ಪರಮೇಶ್ವರ ಆಗ್ರಹಿಸಿದರು. ಅತಿ ಹೆಚ್ಚು ಬಡತನವಿರುವ ಈ ಭಾಗದಲ್ಲಿ ಜನರು ಮಳೆಯಾಧಾರಿತ ಕೃಷಿ ನಂಬಿ ಜೀವನ ಮಾಡುತ್ತಿದ್ದು, ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗುತ್ತಿದ್ದು, ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ರಾಜ್ಯ ಸರ್ಕಾರ ಮನವಿ ಮಾಡಿದ್ದು, ಈ ವ್ಯಾಪ್ತಿಗೆ ಎತ್ತಿನಹೊಳೆ ಯೋಜನೆ ಸೇರಿಸಿ ರಾಷ್ಟ್ರೀಯ ಯೋಜನೆಯನ್ನಾಗಿಸಿದರೆ ಈ ಭಾಗದ ಬರಪೀಡಿತ ಪ್ರದೇಶದ ಜನತೆ ಬಂಗಾರದ ಬೆಳೆ ಬೆಳೆಯುತ್ತೇವೆ ಎಂದರು.
ತಾಲೂಕು ಬರ ಪ್ರದೇಶವಾಗಿದ್ದು, ಮಳೆಯಾಧಾರಿತ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ಈ ಭಾಗದ ಯುವಜನತೆ ಕೈಗಾರಿಕೆ, ನೀರಾವರಿ ಯೋಜನೆಗಳಿಲ್ಲದೆ ಜೀವನ ನಿರ್ವಹಣೆಗೆ ತತ್ತರಿಸುತ್ತಿದೆ. ಇದಕ್ಕೆ ಉದ್ಯೋಗ ನೀಡುವ ಕೆಲಸವಾಗಬೇಕಾಗಿದೆ.
- ಎಂ.ವಿ.ವೀರಭದ್ರಯ್ಯ ಶಾಸಕ