

ಮುದ್ದೇಬಿಹಾಳ: ಶಿಕ್ಷಣದಿಂದ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ. ಶಾಲೆಗೆ ಬರುವ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಕರ ಕರ್ತವ್ಯ ಮಾತ್ರವಲ್ಲ, ಅದು ಅವರ ಜವಾಬ್ದಾರಿಯೂ ಆಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಹೇಳಿದರು.
ಪಟ್ಟಣದ ಮಹಿಬೂಬ್ ನಗರದಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಶರಣ ಬೆಳಗು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕದಳಿ ವೇದಿಕೆ ಅಧ್ಯಕ್ಷೆ ಕಾಶಿಬಾಯಿ ಶಿವಯೋಗೆಪ್ಪ ರಾಂಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಬಾಲ್ಯದಲ್ಲೇ ಉತ್ತಮ ಶಿಕ್ಷಣ ನೀಡಿದರೆ ಭವಿಷ್ಯದಲ್ಲಿ ಅವರು ಸಾಕಷ್ಟು ಸಾಧನೆ ಮಾಡಬಲ್ಲರು. ವಿದ್ಯಾರ್ಥಿನಿಯರಿಗೆ ನೀಡುವ ಉತ್ತಮ ಶಿಕ್ಷಣ ಅವರು ಸಾಧನೆಗೆ ಪ್ರೇರಣೆಯಾಗುತ್ತದೆ. ಪಾಲಕರು ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಉನ್ನತ ಶಿಕ್ಷಣದವರೆಗೂ ಓದಿಸಬೇಕು ಎಂದರು.
ಎಂಜಿವಿಸಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಬೋರಮ್ಮ ರಾಂಪುರ(ಪೊಲೀಸ್‌ಪಾಟೀಲ), ಅನ್ನಪೂರ್ಣ ಕಿತ್ತೂರ ಮಾತನಾಡಿದರು.
ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ ಮಾತನಾಡಿದರು. ಮನೆಯಲ್ಲಿ ಮಹಾಮನೆ ಬಳಗದ ಅಧ್ಯಕ್ಷ ಬಿ.ವಿ. ಕೋರಿ, ಬಿ.ಪಿ.ಪಾಟೀಲ, ಎಸ್.ಎ. ಬೇವಿನಗಿಡದ, ಎನ್.ಆರ್. ಮೊಕಾಶಿ, ಎಸ್.ಆರ್. ಗೌಡರ, ಎಂ.ಎಸ್. ಬಿರಾದಾರ, ಕದಳಿ ವೇದಿಕೆ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.
ಮಕ್ಕಳಿಗೆ ಕದಳಿ ವೇದಿಕೆ ವತಿಯಿಂದ ಊಟಕ್ಕಾಗಿ 50 ತಟ್ಟೆ, 50 ಲೋಟ ದೇಣಿಗೆಯಾಗಿ ನೀಡಲಾಯಿತು. ಶಿಕ್ಷಕಿ ಮಹಾದೇವಿ ವಾಲಿ ಸ್ವಾಗತಿಸಿದರು. ಮಹಾದೇವಿ ನಾಲತವಾಡ ನಿರೂಪಿಸಿದರು. ವಿದ್ಯಾ ತಡಸದ ವಂದಿಸಿದರು.