

| ಹೀರಾನಾಯ್ಕ ಟಿ. ಬಳ್ಳಾರಿ
ಅಪೌಷ್ಟಿಕತೆ ಹೋಗಲಾಡಿಸಲು ಮತ್ತು ಬಡ ಕುಟುಂಬ ಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಬಡ ಮಹಿಳೆಯರಿಗೆ ಉಚಿತವಾಗಿ ಕೋಳಿ ಮರಿಗಳ ವಿತರಣೆಗೆ ಸರ್ಕಾರ ಮುಂದಾಗಿದೆ. ಜೇನು, ಕುರಿ, ಹಸು ಸಾಕಣೆಗೆ ಪ್ರೋತ್ಸಾಹಿಸುತ್ತಿರುವ ಮಾದರಿಯಲ್ಲೇ ಕೋಳಿ ಸಾಕಣೆಯನ್ನು ಉತ್ತೇಜಿಸಲು ನಾಟಿಕೋಳಿ ಮರಿಗಳನ್ನು ಮಹಿಳೆಯರಿಗೆ ನೀಡಲಾಗುತ್ತಿದೆ. ಕುಕ್ಕುಟೋದ್ಯಮವನ್ನು ಪ್ರೋತ್ಸಾಹಿಸಲು ಹಾಗೂ ಮಾರುಕಟ್ಟೆಯನ್ನು ವಿಸ್ತರಿಸಲು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ತಾಲೂಕುಗಳಿಗೆ ಗುರಿ ನಿಗದಿ ಪಡಿಸಲಾಗಿದ್ದು, ಅದರಂತೆ ಪ್ರತಿ ಫಲಾನುಭವಿಗೆ ತಲಾ 20 ಕೋಳಿಮರಿ ನೀಡಲು ಯೋಜನೆ ರೂಪಿಸಲಾಗಿದೆ. ಪ್ರತಿ ತಾಲೂಕಿಗೆ 106 ಫಲಾನುಭವಿಗಳಂತೆ ಐದು ವಾರದ ನಾಟಿ ಕೋಳಿ ಮರಿ ವಿತರಿಸಲಾಗುತ್ತಿದೆ. ಬಡತನ ರೇಖೆಗಿಂತ ಕೆಳ ಗಿರುವ ರೈತ ಮಹಿಳೆಯರು, ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು, ಪ್ರಾಥಮಿಕ ಕೋಳಿ ಸಹಕಾರ ಸಂಘಗಳಲ್ಲಿರುವ ಮಹಿಳಾ ಸದಸ್ಯರಿಗೆ, ರೈತ ಉತ್ಪಾದಕ ಸಂಸ್ಥೆಯ ಮಹಿಳಾ ಸದಸ್ಯೆಯರಿಗೆ ಆದ್ಯತೆ ನೀಡಲಾಗುತ್ತದೆ.
ಕಾಲೇಜು, ಸಂಸ್ಥೆಯಲ್ಲಿ ಉತ್ಪಾದನೆ: ಐದು ವಾರದ ಕೋಳಿ ಮರಿಗೆ ಸರ್ಕಾರಕ್ಕೆ 130 ರೂ. ವೆಚ್ಚವಾಗಲಿದೆ. ಇದರಲ್ಲಿ ಒಂದು ದಿನದ ಮರಿಗೆ 28 ರೂ., ಐದು ವಾರ ಸಾಕಣೆ ವೆಚ್ಚ 102 ರೂ. ಸೇರಿದೆ. ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಕುಕ್ಕುಟ ಕ್ಷೇತ್ರಗಳಲ್ಲಿ, ಬೆಂಗಳೂರಿನ ಹೆಸರಘಟ್ಟದ ಕೇಂದ್ರೀಯ ಕುಕ್ಕಟ ಅಭಿವೃದ್ಧಿ ಸಂಸ್ಥೆ, ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ಕೋಳಿಮರಿಗಳನ್ನು ಉತ್ಪಾದಿಸಲಾಗುತ್ತದೆ.
ನಡೆದಿದೆ ಪ್ರಕ್ರಿಯೆ: ರಾಜ್ಯದಲ್ಲಿ 2022-23ನೇ ಸಾಲಿನ ಆಯವ್ಯಯದಂತೆ ಐದು ಲಕ್ಷ ನಾಟಿಕೋಳಿ ಮರಿಗಳನ್ನು ಉತ್ಪಾದಿಸಿ 25 ಸಾವಿರ ಗ್ರಾಮೀಣ ಮಹಿಳೆಯರಿಗೆ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅದಕ್ಕಾಗಿ 2019-20ನೇ ಸಾಲಿನ ಆಯವ್ಯಯದಲ್ಲಿ ಘೊಷಿಸಿದಂತೆ ಐದು ಕೋಟಿ ರೂ. ಮೀಸಲಿಡಲಾಗಿತ್ತು. ಅದರಂತೆ ಇದೀಗ ಆಯಾ ತಾಲೂಕುಗಳಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಅರ್ಜಿ ಆಹ್ವಾನಿಸಿದ್ದು, ಕೋಳಿ ಮರಿಗಳ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ.
ಬಡ ಹೆಣ್ಣುಮಕ್ಕಳಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಆರ್ಥಿಕ ಸಬಲತೆ ಸಾಧಿಸಲು ಸರ್ಕಾರದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ತಲಾ 20 ಕೋಳಿ ಮರಿ ವಿತರಣೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಪ್ರತಿ ತಾಲೂಕಿಗೆ 106 ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಐದು ವಾರದ ಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ. | ಡಾ.ಹನುಮಂತನಾಯ್ಕ ಉಪ ನಿರ್ದೇಶಕ ಪಶುಸಂಗೋಪನಾ ಇಲಾಖೆ ಬಳ್ಳಾರಿ
ಖರ್ಚು ಕಡಿಮೆ ಲಾಭ ಅಧಿಕ: ಹಿತ್ತಲ ನಾಟಿಕೋಳಿಗಳಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೇಡಿಕೆ ಬರುತ್ತಿದೆ. ನಾಟಿಕೋಳಿಗಳ ಸಾಕಣೆಗೆ ಹೆಚ್ಚು ಖರ್ಚಾಗದು. 10 ರಿಂದ 20 ಕೋಳಿ ಇದ್ದರೆ ಮನೆಮುಂದೆ ಸಾಕಬಹುದಾಗಿದೆ. ವೆಚ್ಚಕ್ಕಿಂತ ಅಧಿಕ ಲಾಭ ಪಡೆದುಕೊಳ್ಳಬಹುದು. ಅಲ್ಲದೆ, ಇದಕ್ಕೆ ಹೆಚ್ಚಿನ ಶ್ರಮವೂ ಬೇಕಾಗುವುದಿಲ್ಲ. ಮನೆಯ ಸದಸ್ಯರೇ ಸುಲಭವಾಗಿ ನಿರ್ವಹಣೆ ಮಾಡಬಹುದು. ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಸಹಕಾರಿಯಾಗಲಿದೆ.
ಯೋಜನೆಯ ನಿರ್ವಹಣೆ ಹೇಗೆ?: ರಾಜ್ಯ ಸಹಕಾರ ಕುಕ್ಕುಟ ಮಂಡಳಿ ವ್ಯವಸ್ಥಾಪಕರು ಸಂಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ. ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರು ಆಯಾ ಜಿಲ್ಲೆಯಲ್ಲಿ ಫಲಾನುಭವಿಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಕುಕ್ಕುಟ ಮಂಡಳಿಯ ಪ್ರಾದೇಶಿಕ ಕೇಂದ್ರಗಳ ಸಹಾಯಕ ನಿರ್ದೇಶಕರು ಯೋಜನಾ ಅನುಷ್ಠಾನಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಾರೆ. ಜಿಲ್ಲಾ ಉಪ ನಿರ್ದೇಶಕರು ಹಾಗೂ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಸಮನ್ವಯ ಸಾಧಿಸಿ ಫಲಾನುಭವಿಗಳ ಆಯ್ಕೆ ಮಾಡಬೇಕು. ಆದರೆ, ಸ್ವೀಕರಿಸಿದ ಅರ್ಜಿಯನ್ನು ಆಯ್ಕೆ ಸಮಿತಿ ಮುಂದೆ ಮಂಡಿಸಿ ನಿಯಮಾನುಸಾರ ಅರ್ಹರನ್ನು ಗುರುತಿಸಬೇಕಾಗುತ್ತದೆ.