ಮಹಿಳೆಯರ ಶಿಕ್ಷಣಕ್ಕೆ ಪ್ರೋತ್ಸಾಹ ಅಗತ್ಯ : ಕೋಳಿ

29GDG06
Published on

ಗದಗ: ಹೆಣ್ಣು ಮಗುವಿನ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು. ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರ, ಅದರಲ್ಲೂ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಬಡತನ, ಅನಕ್ಷರತೆ, ಲಿಂಗತಾರತಮ್ಯ, ಅಪೌಷ್ಟಿಕತೆ ಮುಂತಾದ ಸಮಸ್ಯೆಗಳಿಂದ ಹೆಣ್ಣು ಬಳಲುತ್ತಿದ್ದಾಳೆ. ಇಂದಿನ ಆಧುನಿಕ ಯುಗದಲ್ಲೂ  ಹೆಣ್ಣು ಮಗುವನ್ನು ಅಭದ್ರತೆ ಕಾಡುತ್ತಿದೆ ಎಂದರೆ ಸಮಾಜ ಇನ್ನೂ ಹಿಂದುಳಿದಿದೆ ಎಂದೇ ಅರ್ಥ. ಕಲಿತ ಹೆಣ್ಣೂ ಕೂಡ ಉದ್ಯೋಗದ ಸ್ಥಳದಲ್ಲಿ ದೌರ್ಜನ್ಯ ಅನುಭವಿಸುವ ಎಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಈ ಎಲ್ಲ ತೊಡಕುಗಳನ್ನು ನಿವಾರಿಸಿ ಹೆಣ್ಣು ಮಕ್ಕಳಿಗೆ ಸುಭದ್ರತೆಯ ವಾತಾವರಣ ಕಲ್ಪಿಸುವ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಬೇಕಿದೆ ಎಂದು ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ವಿಠ್ಠಲ ಕೋಳಿ ಹೇಳಿದರು.‌

ಸಮೀಪದ ಹಾತಲಗೇರಿ ಗ್ರಾಮದಲ್ಲಿ  ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಹಾಗೂ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯ ಮತ್ತು ಗ್ರಾಮ ಪಂಚಾಯತಿ ಇವರ ಸಂಯುಕ್ತಾಶ್ರಯದಲ್ಲಿ ೩ನೇ‌ದಿನದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದಲ್ಲಿ ಅವರು ಮಹಿಳಾ ‌ಸಬಲೀಕರಣ ಕುರಿತು ಉಪನ್ಯಾಸ ನೀಡಿದರು. 

ಪ್ರಸವಪೂರ್ವ ಲಿಂಗಪತ್ತೆ ಸಂಪೂರ್ಣವಾಗಿ ನಿಷೇಧ, ಹೆಣ್ಣು ಮಕ್ಕಳ ಬಾಲ್ಯ ವಿವಾಹ ಪದ್ಧತಿಗೆ ನಿರ್ಬಂಧ, ಗರ್ಭಿಣಿಯರಿಗೆ ಪ್ರಸವಪೂರ್ವ ಆರೋಗ್ಯಸೇವೆಯ ಸೌಲಭ್ಯ, ಸರಕಾರದಿಂದ ಹೆಣ್ಣು ಮಗು ರಕ್ಷಿಸಿ ಯೋಜನೆ, 14 ವರ್ಷಗಳವರೆಗಿನ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ, ಸ್ಥಳೀಯ ಸರಕಾರಿ ಸಂಸ್ಥೆಗಳಲ್ಲಿ ಮಹಿಳೆಯರಿಗೆ 1/3ರಷ್ಟು ಮೀಸಲು, ಸತಿ ವಿರೋಧಿ, ವರದಕ್ಷಿಣೆ ವಿರೋಧಿ ಕಾನೂನುಗಳು, ಎಸ್ಸಿ, ಎಸ್ಟಿ ವರ್ಗದ ಹೆಣ್ಣುಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ, ಹೆಣ್ಣು ಮಕ್ಕಳ ಪಾಲನೆ ಮತ್ತು ಪ್ರಾಥಮಿಕ ಶಿಕ್ಷಣದ ಖಾತ್ರಿಗಾಗಿ ಬಾಲವಾಡಿ ಮತ್ತು ಶಿಶುಮಂದಿರಗಳ ಆರಂಭ., ಹಿಂದುಳಿದ ಪ್ರದೇಶಗಳ ಹೆಣ್ಣು ಮಕ್ಕಳ ಕಲಿಕೆಗಾಗಿ ಮುಕ್ತ ಕಲಿಕಾ ವ್ಯವಸ್ಥೆ. ಈ ಎಲ್ಲಾ ಕಾನೂನುಗಳು ಮಹಿಳೆಯರಿಗೆ ಇವೆ. ಅವುಗಳನ್ನು‌ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

ಈ ವೇಳ ಎನ್.ಎಸ್.ಎಸ್. ಶಿಬಿರಾರ್ಥಿಗಳಿಂದ ಮತ‌ದಾರರ ಪಟ್ಟಿಯಲ್ಲಿ ಮತದಾರರು ಹೆಸರು ಸೇರ್ಪಡೆ ಕುರಿತು ನಾಟಕ ಮಾಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಗ್ರಾ.ಪಂ ಸದಸ್ಯೆ ಭೀಮವ್ವ ಲಕ್ಕಣ್ಣವರ, ಗ್ರಾ.ಪಂ ‌ಸದಸ್ಯ ಈರಪ್ಪ ಬೇಲೇರಿ, ಹನುಮಂತಗೌಡ ಪಾಟೀಲ, ಎಸ್.ಡಿ.ಎಂ.ಸಿ ಅಧ್ಯಕ್ಷ ಜಿ.ಎಸ್.‌ಪೂಜಾರ, ಉಪಾಧ್ಯಕ್ಷ ಎಸ್.ಎಂ.‌ಬಾರಕೇರ, ದೈಹಿಕ ಶಿಕ್ಷಕ ಕೆ.ಎಸ್. ಸ್ವಂಟಿ, ಶಿಕ್ಷಕ ಹೆಚ್.ಡಿ.ಕುರಿ, ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಜ್ಯೋತಿ‌ ಸಿ.ವಿ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.‌ಸಿ.ಬಿ. ರಣಗಟ್ಟಿಮಠ ಸೇರಿದಂತೆ ‌ಇತರರಿದ್ದರು.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net