ನಾಡಹಬ್ಬದಲ್ಲಿ ನೀರೆಯರ ಬಳುಕು, ಪ್ರಮುಖ ರಸ್ತೆಗಳಲ್ಲಿ ಹೆಜ್ಜೆಹಾಕಿ ಗಮನಸೆಳೆದ ಮಹಿಳೆಯರು

7
Published on

ಮೈಸೂರು: ಮಲ್ಲಿಗೆ ಹೂ ಮುಡಿದು ಮೈಸೂರು ರೇಷ್ಮೆ ಸೀರೆಯುಟ್ಟ ನೀರೆಯರು ನಗರದ ರಸ್ತೆಗಳಲ್ಲಿ ಹೆಜ್ಜೆ ಹಾಕುವ ಮೂಲಕ ನಾಡಹಬ್ಬದಲ್ಲಿ ಕಂಪು ಸೂಸಿದರು.

ದಸರಾ ಮಹೋತ್ಸವ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಮೈಸೂರು ಪರಂಪರೆ ಬಿಂಬಿಸುವ ‘ವಾಕಥಾನ್’ ಎಲ್ಲರ ಗಮನ ಸೆಳೆಯಿತು.

ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೊರಟ ವಾಕಥಾನ್‌ನಲ್ಲಿ ಸಾಂಪ್ರದಾಯಿಕವಾಗಿ ಮೈಸೂರು ಸೀರೆ ಉಟ್ಟು, ಮೈಸೂರು ಮಲ್ಲಿಗೆ ಹೂ ಮುಡಿದಿದ್ದ ಸಾವಿರಾರು ಮಹಿಳೆಯರು ಸಾಗಿದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಸಮಿತಿ ಅಧ್ಯಕ್ಷರು, ಸದಸ್ಯರು, ಡೊಳ್ಳು, ನಗಾರಿ ಬಾರಿಸುವುದರ ಮೂಲಕ ವಾಕಥಾನ್‌ಗೆ ಚಾಲನೆ ನೀಡಿದರು.

ಮಹಾರಾಣಿ ಕೆಂಪು ಚೆಲುವಾಜಮ್ಮಣ್ಣಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪೋಷಾಕಿನಲ್ಲಿ ಇಬ್ಬರು ಅಲಂಕೃತ ರಥದಲ್ಲಿ ಕುಳಿತಿದ್ದರು. ಮುಂದೆ ಸಾಗಿದ ರಥದ ಮುಂದೆ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಪೂಜಾ ಕುಣಿತ ಸೇರಿದಂತೆ ಅನೇಕ ಜಾನಪದ ಕಲಾತಂಡಗಳ ಕಲಾವಿದರು ನೃತ್ಯ ಪ್ರದರ್ಶಿಸಿ ನಡೆದರು.

ರಥದ ಹಿಂದೆ ಮೈಸೂರು ರೇಷ್ಮೆ ಸೀರೆಯುಟ್ಟು, ಮೈಸೂರು ಮಲ್ಲಿಗೆ ಮುಡಿದಿದ್ದ ಮಹಿಳೆಯರು ಹೆಜ್ಜೆ ಹಾಕಿದರು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಮೇಲ್ವಿಚಾರಕರು ಸೇರಿದಂತೆ ವಿವಿಧ ಸಂಘಟನೆಗಳ ಮಹಿಳೆಯರು ಹಳದಿಯ ಸೀರೆಯನ್ನು ಉಟ್ಟು ಹೆಜ್ಜೆ ಹಾಕಿ ಗಮನ ಸೆಳೆದರು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟು ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆ, ಧನ್ವಂತರಿ ರಸ್ತೆ ಮೂಲಕ ಜೆ.ಕೆ.ಮೈದಾನದವರೆಗೆ ಸಾಗಿ ಅಂತಿಮಗೊಳಿಸಿತು.

ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಉಪ ವಿಶೇಷಾಧಿಕಾರಿ ಬಿ.ಎಂ.ಸವಿತಾ, ಕಾರ್ಯಾಧ್ಯಕ್ಷ ಬಿ.ಬಸವರಾಜು, ಅಧ್ಯಕ್ಷೆ ಮಲ್ಲಿಗೆ ವೀರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net