

ಆಲೂರು: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಬುಧವಾರ ತಾಲೂಕಿನಾದ್ಯಂತ ವಿವಿಧ ದೇಗುಲಗಳಲ್ಲಿನ ಶಿವಲಿಂಗಕ್ಕೆ ಅಭಿಷೇಕ, ಅಲಂಕಾರ ಹಾಗೂ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.
ಮುಂಜಾನೆಯೇ ದೇಗುಲಗಳಿಗೆ ಹೂವಿನ ಚಪ್ಪರ ಹಾಕಲಾಗಿತ್ತು. ಮಹಿಳೆಯರು ನೀರು ಹಾಕಿ ರಂಗೋಲಿ ಬಿಡಿಸಿದರು. ಬಾಳೆ ಕಂದುಗಳನ್ನು ಕಟ್ಟಿ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಮುಂಜಾನೆಯಿಂದಲೇ ಭಕ್ತರು ದೇಗುಲಗಳಿಗೆ ಆಗಮಿಸಿ ಹಣ್ಣು-ಕಾಯಿ ಸಲ್ಲಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಪಟ್ಟಣದ ಕೆಇಬಿ ವೃತ್ತದಲ್ಲಿರುವ ಸಂಗಮೇಶ್ವರ, ಮರಸು ಗ್ರಾಮದ ವೀರಭದ್ರೇಶ್ವರ, ಎಂ.ಹೊಸಳ್ಳಿಯ ಬಸವೇಶ್ವರಸ್ವಾಮಿ, ಹುಣಸುವಳ್ಳಿ ವೀರಭದ್ರಸ್ವಾಮಿ, ದೊಡ್ಡಕಣಗಾಲು ವೀರಭದ್ರಸ್ವಾಮಿ, ಸೊಂಪುರ ನಂಜುಂಡೇಶ್ವರ ಸ್ವಾಮಿ, ಕಿರುಗಡಲು ಪಂಚಲಿಂಗೇಶ್ವರ ಸ್ವಾಮಿ, ಹೊಸುರು ಬಸವಣ್ಣ, ಕದಾಳು ತಿಪುರಂಕೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರು ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಅಂತೆಯೇ ಪಾಳ್ಯ ಹೋಬಳಿಯ ಶಿಂಗೋಡನಹಳ್ಳಿಯ ಸಂಗಮೇಶ್ವರಸ್ವಾಮಿ, ಅಬ್ಬನ ಸಂಗಮೇಶ್ವರ, ಜೆ.ತಿಮ್ಮನಹಳ್ಳಿ ಭೈರವೇಶ್ವರಸ್ವಾಮಿ, ಕುಂಬಾರ ಹಳ್ಳಿ ಅಮೃತೇಶ್ವರ, ಕಾರ್ಜುವಳ್ಳಿಯ ಮಲ್ಲೇಶ್ವರಸ್ವಾಮಿ, ಮುರುಡೂರಿನ ಮುರುಡೇಶ್ವರ, ಕಣತೂರು ವೀರಭದ್ರೇಶ್ವರಸ್ವಾಮಿ, ಬಿಳುಗರವಳ್ಳಿ ಮಲ್ಲೇಶ್ವರ ದೇವಾಲಯದಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಕುಂದೂರು ಹೋಬಳಿಯ ತುರಗನಹಳ್ಳಿ ಮಲ್ಲೇಶ್ವರ, ಬಸವಣ್ಣ, ಹಸುಗನೂರಿನ ಈಶ್ವರ, ಕಾರಿಗನಹಳ್ಳಿಯ ಬಸವೇಶ್ವರ, ಕಡಗಬಾಲದ ಬಸವಣ್ಣ, ಮಣಿಗನಹಳ್ಳಿಯ ಬ್ರಹ್ಮಲಿಂಗೇಶ್ವರ, ನೆಲ್ಲಿಗೆರೆ, ತಟ್ಟೆಕೆರೆಯ ಮಲ್ಲಿಕಾರ್ಜುನ, ಮೇರ್ವೆ ಗ್ರಾಮದಲ್ಲಿನ ಅಮೃತಲಿಂಗೇಶ್ವರ, ಚಟ್ಟನಹಳ್ಳಿ ಮತ್ತು ಹಂಚೂರು ಗ್ರಾಮದ ಈಶ್ವರ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.
ಕೆಂಚಮ್ಮ ಹೊಸಕೋಟೆ ಹೋಬಳಿಯ ಪಾರ್ವತಮ್ಮ ಬೆಟ್ಟದ ಶ್ರೀ ಮಲ್ಲಿಕಾರ್ಜುನ, ಅಂಜಳಿಗೆಯ ಅಮೃತೇಶ್ವರ, ಮಲ್ಲಾಪುರದ ಬಸವಣ್ಣ, ಕಣಿವೆ ಬಸವನಹಳ್ಳಿಯ ಕಾಡುಬಸವೇಶ್ವರ, ಹೊಸಕೋಟೆಯ ನಂಜುಂಡೇಶ್ವರ ಸ್ವಾಮಿ ಸೇರಿದಂತೆ ತಾಲೂಕಿನ ಎಲ್ಲ ಮುಜರಾಯಿ ದೇಗುಲಗಳಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಾಗರಣೆಯೊಂದಿಗೆ ವಿಶೇಷ ಪೂಜಾ ಕೈಂಕರ್ಯ ನಡೆಯಿತು.