ವೃದ್ಧೆಯ ಏಕಾಂಗಿ ಹೋರಾಟಕ್ಕೆ ಸಿಕ್ಕಿತು ಜಯ-ಗೌರಿ ನಾಯ್ಕ ತೋಡಿದ ಬಾವಿಯಲ್ಲಿ ಸ್ಪುರಿಸಿತು ಜಲ

sirsi open well
Published on

ಶಿರಸಿ: ನಗರದ ಗಣೇಶನಗರದ ಅಂಗನವಾಡಿಯಲ್ಲಿ ಜಲ ಸಾಧಕಿ ಗೌರಿ ನಾಯ್ಕ ತೋಡುತ್ತಿದ್ದ ಬಾವಿಯಲ್ಲಿ ಬುಧವಾರ ನೀರು ಲಭಿಸಿದೆ. ಇದರಿಂದಾಗಿ ಸುಧೀರ್ಘ ಹೋರಾಟದ ಈ ಬಾವಿಯಲ್ಲಿ ಅಂತೂ ಸಂತಸದ ಸುದ್ದಿ ಲಭಿಸಿದಂತಾಗಿದೆ.
ಗಣೇಶನಗರದ ಅಂಗನವಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದನ್ನು ಅರಿತ ಗೌರಿ ನಾಯ್ಕ ಸ್ವಯಂ ಪ್ರೇರಣೆಯಿಂದ ಜ.30ರಿಂದ ಬಾವಿ ತೋಡಲಾರಂಭಿಸಿದ್ದರು. ಸುಮಾರು 8 ದಿನಗಳ ಕಾರ್ಯ ನಡೆಸಿ, 10 ಅಡಿಗಳಷ್ಟು ಬಾವಿ ತೋಡಿದ ಬಳಿಕ ಸಮಸ್ಯೆಗಳು ಸಾಲು ಸಾಲಾಗಿ ಎದುರಾಗಿದ್ದವು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾವಿ ತೋಡಲು ಅನುಮತಿ ಪಡೆದಿಲ್ಲ ಎಂದು ಆಪಾದಿಸಿ, ಗೌರಿ ನಾಯ್ಕ ಅವರಿಗೆ ಬಾವಿ ತೋಡುವ ಕಾರ್ಯ ಸ್ಥಗಿತಗೊಳಿಸುವಂತೆ ಸೂಚಿಸಿದ್ದರು. ಆ ಬಳಿಕ ಇಲಾಖೆಯ ಈ ವರ್ತನೆಗೆ ಸ್ಥಳೀಯರೇ ರೋಷ ವ್ಯಕ್ತಪಡಿಸಿ, ಗೌರಿ ಅವರಿಗೆ ಜನಾಂದೋಲನ ಮಾದರಿಯಲ್ಲಿ ಬೆಂಬಲ ವ್ಯಕ್ತಪಡಿಸಿದ್ದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಅಧಿಕಾರಿಗಳು ಬಾವಿ ಇರುವ ಜಾಗಕ್ಕೆ ಗೇಟಿಗೆ ಬೀಗವನ್ನೂ ಹಾಕಿದ್ದರು. ಈ ನಡುವೆ ಅಂಗನವಾಡಿ ಕಾರ್ಯಕರ್ತೆಗೆ ನೊಟೀಸ್ ಸಹ ನೀಡಲಾಗಿತ್ತು. ಅಂತಿಮವಾಗಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮೌಖಿಕ ಒಪ್ಪಿಗೆ ನೀಡುವ ಮೂಲಕ ಬಾವಿ ತೋಡುವ ಕಾರ್ಯ ಮುಂದುವರಿದಿತ್ತು. ಈ ನಡುವೆ ಗೌರಿ ನಾಯ್ಕ ಅವರ ಆರೋಗ್ಯದಲ್ಲಿಯೂ ತೊಂದರೆ ಕಾಣಿಸಿಕೊಂಡಿದ್ದರಿಂದ ಇಬ್ಬರು ಕೆಲಸದವರನ್ನು ಸಹಾಯಕ್ಕೆ ಪಡೆದು ಕಾರ್ಯ ಮುಂದುವರಿಸಿದ್ದರು.
ಬಾವಿ 45 ಅಡಿಗಳಷ್ಟು ಆಳಕ್ಕಿಳಿದಿದ್ದು, ಬುಧವಾರ ಬಾವಿಯಲ್ಲಿ ನೀರು ಕಾಣಿಸಿಕೊಂಡಿದೆ. ಸ್ಥಳೀಯರು ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರೆ, ಬಾವಿಯಿಂದ ನೀರನ್ನು ಎತ್ತಿ ತಲೆಯ ಮೇಲೆ ಹಾಕಿಕೊಳ್ಳುವ ಮೂಲಕ ಗೌರಿ ನಾಯ್ಕ ಸಂಭ್ರಮಿಸಿದ್ದಾರೆ. ಬಾವಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಗೌರಿ, ಇನ್ನೂ ಎರಡು ಅಥವಾ ಮೂರು ಅಡಿಯಷ್ಟು ಆಳ ತೋಡುತ್ತೇನೆ, ಇದರಿಂದ ಬೇಸಿಗೆಯ ದಿನಗಳಲ್ಲಿಯೂ ನೀರಿನ ಕೊರತೆ ಆಗುವುದಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net