

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಬರುವ ಮಹಿಳೆಯರಿಗೆ ವಸತಿ ಸಮಸ್ಯೆ ಎದುರಾದರೆ ನಮ್ಮ ಮನೆಗಳಲ್ಲಿಯೇ ಆತಿಥ್ಯ ಮಾಡಿಕೊಡೋಣ. ಇದಕ್ಕೆ ಸಿದ್ಧರಿದ್ದೇವೆ ಎಂದು ಸಮ್ಮೇಳನದ ಮಹಿಳಾ ಸಮಿತಿ ಸದಸ್ಯರು ಮಾಹಿತಿ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ಸಮಿತಿ ಸಭೆಯಲ್ಲಿ ಮಾತನಾಡಿದ ಸದಸ್ಯರು, ಕೊನೆಯ ಕ್ಷಣದಲ್ಲಿ ಸಮ್ಮೇಳನಕ್ಕೆ ಮಹಿಳೆಯರು ಆಗಮಿಸಿ ವಸತಿಯ ತೊಂದರೆಯಾದಲ್ಲಿ ತಮ್ಮ ಮನೆಯಲ್ಲೇ ಆತಿಥ್ಯ ನೀಡುತ್ತೇವೆ ಎನ್ನುವ ಮೂಲಕ ಮಾದರಿಯಾದರು.
ಸಮಿತಿಯ ಅಧ್ಯಕ್ಷರೂ ಆದ ರೈತಪರ ಹೋರಾಟಗಾರ್ತಿ ಸುನಂದಾ ಜಯರಾಂ, ಸಮ್ಮೇಳನಕ್ಕೆ ಆಗಮಿಸಲಿರುವ ಮಹಿಳೆಯರಿಗೆ ಉತ್ತಮ ಆತಿಥ್ಯ ನೀಡಬೇಕು. ಅವರಿಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಈ ಬಾರಿ ಹೆಚ್ವಿನ ಮಹಿಳೆಯರು ನೋಂದಣಿ ಮಾಡಿಕೊಂಡು ಭಾಗವಹಿಸಲು ಯೋಜನೆ ರೂಪಿಸಬೇಕು. ವಿನೂತನ ರೀತಿಯಲ್ಲಿ ಪೂರ್ಣಕುಂಭ ಈ ಬಾರಿ ಪೂರ್ಣಕುಂಭ ವಿನೂತನವಾಗಿರಬೇಕು. ಮಹಿಳೆಯರು ಅಕ್ಷರ ಜಾತ್ರೆಯ ರೀತಿ ವಿವಿಧ ಸಾಹಿತಿಗಳ ಪುಸ್ತಕ ಗಳನ್ನು ಸಹ ಪೂರ್ಣಕುಂಭದಲ್ಲಿ ಕನ್ನಡ ಭಾವುಟ ಹಿಡಿದು ಸಾಗಲಿ. ಇದರಿಂದ ಮಹಿಳಾ ಸಾಕ್ಷರತೆಯ ಜಾಗೃತಿಗೆ ಜಿಲ್ಲೆ ನೀಡಿರುವ ಪ್ರಮುಖ್ಯತೆ ಇಡಿ ರಾಷ್ಟ್ರಕ್ಕೆ ತಿಳಿಯಲಿ ಎಂದು ಸಲಹೆ ನೀಡಿದರು.
ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ. ಬರುವ ಮಹಿಳೆಯರಿಗೆ ಮೂಲ ಸೌಕರ್ಯಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು. ಸಮ್ಮೇಳನದ ನೋಂದಣಿಗೆ ಕೊನೆಯವರೆಗೂ ಅವಕಾಶವಿದೆ. ಆದರೆ ನೆನಪಿನ ಕಾಣಿಕೆ ನೀಡಲು ಒಂದು ಅಂತಿಮ ದಿನಾಂಕ ನಿಗದಿ ಮಾಡಿ, ಅಲ್ಲಿಯವರಿಗೆ ನೋಂದಣಿ ಮಾಡಿಕೊಂಡವರಿಗೆ ಮಾತ್ರ ನೀಡಲಾಗುವುದು. ಈ ಬಗ್ಗೆ ನಿಖರ ಮಾಹಿತಿಯನ್ನು ನೀಡಲಾಗುವುದು. ಅದನ್ನು ಸಹ ಮಹಿಳೆಯರಿಗೆ ತಲುಪಿಸಬೇಕು ಎಂದರು.
ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ.ಸೀತಾಲಕ್ಷ್ಮೀ ಮಾತನಾಡಿ, ಮಹಿಳಾ ಸಮಿತಿ ಬೇರೆ ಸಮಿತಿಯೊಂದಿಗೆ ಸಮನ್ವಯವಾಗಿ ಕಾರ್ಯನಿರ್ವಹಿಸಿ ಮಹಿಳೆಯರಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಈ ಹಿನ್ನಲೆಯಲ್ಲಿ ಮಹಿಳಾ ಸಮಿತಿಯ 5 ಸದಸ್ಯರನ್ನೊಳಗೊಂಡಂತೆ ಆರೋಗ್ಯ, ವಸತಿ, ಸಾರಿಗೆ, ಆಹಾರ, ಆಸನ, ಸ್ವಯಂ ಸೇವಕರು, ಸಾಂಸ್ಕೃತಿಕ, ನೊಂದಣಿ ಹಾಗೂ ಸಮನ್ವಯ ಉಪಸಮಿತಿಗಳನ್ನು ಸಭೆಯಲ್ಲಿ ರಚಿಸಲಾಯಿತು. ಸಮ್ಮೇಳನದ ಮಹಿಳಾ ಗೋಷ್ಠಿಯಲ್ಲಿ ಮಂಡಿಸಬೇಕಾದ ವಿಷಯಗಳ ಕುರಿತು ಮುಂದಿನ ಸಭೆಯಲ್ಲಿ ವಿಷಯಗಳನ್ನು ತಿಳಿಸಲಾಗುವುದು. ಅದೇ ರೀತಿ ವಿಷಯವನ್ನು ಕಸಾಪ ಅಧ್ಯಕ್ಷರಿಗೆ ಕಳುಹಿಸಲಾಗುವುದು ಎಂದರು.
ಸಭೆಯಲ್ಲಿ ಸಮಿತಿ ಉಪಾಧ್ಯಕ್ಷೆ ಸೌಭಾಗ್ಯ ಮಹದೇವು, ಸಂಚಾಲಕಿ ಸಿ.ಜಿ.ಸುಜಾತಾ ಕೃಷ್ಣ, ಸದಸ್ಯರಾದ ಮಾಲತಿ, ಹೇಮಾವತಿ, ಉಷಾರಾಣಿ, ಚಂದ್ರಕಲಾ ಶಿವರಾಮ, ಸಿ.ಕುಮಾರಿ, ಡಾ.ಅನುಸೂಯ, ನೀಲಾ ಶಿವಮೂರ್ತಿ, ಸುಜಾತಾಮಣಿ, ಗಾಯಿತ್ರಿ, ಶೋಭಾ ವೆಂಕಟೇಶ್, ವಿನುತಾ, ಶಕುಂತಲಾ, ರೂಪಶ್ರೀ, ಸುಜಾತಾ ಸಿದ್ದಯ್ಯ, ಪದ್ಮಾ ಶ್ರೀನಿವಾಸ, ಜಯಮ್ಮ, ಶ್ರೀಲತಾ ಅನಿತಾ, ವರಲಕ್ಷ್ಮೀ, ಲತಾ, ಪುಷ್ಪಾ, ಅನುಪಮಾ ಇತರರಿದ್ದರು.