ಮಹಿಳೆಯರಿಂದ ವಸೂಲಿ ಮಾಡಿದ ಸಾಲದ ಕಂತುಗಳ ಹಣ ಫೈನಾನ್ಸ್‌ಗೆ ತುಂಬದೆ ವಂಚನೆ

Crime Logo
Published on

ಬಂಕಾಪುರ: ಖಾಸಗಿ ಫೈನಾನ್ಸ್‌ನ ಮಹಿಳಾ ಸಂಘಗಳ ಸದಸ್ಯೆಯರಿಂದ ಸಾಲದ ಕಂತುಗಳ ಹಣ ವಸೂಲಿ ಮಾಡಿ ಮರಳಿ ಫೈನಾನ್ಸ್‌ಗೆ ಕಟ್ಟದೆ 6 ಲಕ್ಷ ರೂ. ವಂಚಿಸಿದ ಆರೋಪದಡಿ ಫೈನಾನ್ಸ್‌ನ ಇಬ್ಬರು ನೌಕರರ ವಿರುದ್ಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತ ಫೈನಾನ್ಸಿಯಲ್ ಇನಕ್ಲೂಜನ್ ಲಿಮಿಟೆಡ್‌ನ ನೌಕರರಾದ ದಾವಣಗೆರೆಯ ಶ್ರೀನಿವಾಸ ಪಿ.ಎಸ್. (23) ಹಾಗೂ ರಾಣೆಬೆನ್ನೂರ ನಗರದ ಸೋಮಶೇಖರ ಈರಪ್ಪ ಬುಡಪನಹಳ್ಳಿ (23) ಮೋಸ ಮಾಡಿದ ಆರೋಪಿತರು.
ಇವರ ವಿರುದ್ಧ ಫೈನಾನ್ಸ್‌ನ ವ್ಯವಸ್ಥಾಪಕ ಮಂಜುನಾಥ ರುದ್ರಗೌಡ ಗಿರೇಗೌಡ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿತರು ಫೈನಾನ್ಸ್‌ನಲ್ಲಿ ಫಿಲ್ಡ್ ಅಸಿಸ್ಟಂಟ್ ಎಂದು ಕೆಲಸ ಮಾಡಿಕೊಂಡಿದ್ದು, ಇಬ್ಬರು ಮಹಿಳಾ ಸಂಘಗಳ ಸದಸ್ಯೆಯರಿಂದ ಸಾಲದ ಕಂತುಗಳ ಹಣ ವಸೂಲಿ ಮಾಡಿಕೊಂಡು ಬಂದು ಅದನ್ನು ಫೈನಾನ್ಸ್‌ಗೆ ಕಟ್ಟದೆ ಸ್ವಂತಕ್ಕೆ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net