

ಸಿಂದಗಿ: ವೀರಭದ್ರದೇವರು ಹಾಗೂ ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣದ ಸಾರಂಗಮಠ-ಗಚ್ಚಿನಮಠದ ವಾರ್ಷಿಕ ಸಂಪ್ರದಾಯದಂತೆ ಮಂಗಳವಾರ ಮಹಿಳೆಯರು ಬೆಳ್ಳಿ ತೇರನ್ನೆಳೆದು ಭಕ್ತಿ ಮೆರೆದರು.
ಕಳೆದ ಏಳು ವರ್ಷಗಳಿಂದಲೂ ಮಹಿಳೆಯರೇ ರಥೋತ್ಸವದ ಸಾರಥ್ಯ ವಹಿಸುತ್ತಿರುವುದು ಇಲ್ಲಿನ ವಿಶೇಷವಾಗಿದೆ. ವಿಶೇಷವಾದ ಸಂಕಲ್ಪದ ಹಿನ್ನಲೆಯಲ್ಲಿ ಸಾರಂಗಮಠದಿಂದ ಸಿದ್ಧಗೊಂಡಿರುವ ಈ ತೇರು ಸಂಪೂರ್ಣ ಬೆಳ್ಳಿಯಿಂದ ಕೂಡಿದೆ. ತೇರಿನಲ್ಲಿ ವೀರಭದ್ರ ದೇವರು ಮತ್ತು ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿಗಳನ್ನು ಬೆಳ್ಳಿಪೀಠದ ಮೇಲೆ ಪ್ರತಿಷ್ಠಾಪಿಸಿ, ರಥೋತ್ಸವ ನಡೆಸಲಾಯಿತು.
ರಥೋತ್ಸವವು ಸ್ವಾಮಿ ವಿವೇಕಾನಂದ ವೃತ್ತ, ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳ ಬೀದಿ ಮುಖಾಂತರ ಲಿಂ.ಚೆನ್ನವೀರ ಸ್ವಾಮೀಜಿ ಪ್ರೌಢಶಾಲೆ ಆವರಣದಲ್ಲಿನ ವೀರಭದ್ರ ಹಾಗೂ ಭದ್ರಕಾಳಿ ಅಮ್ಮನವರ ದೇವಸ್ಥಾನಕ್ಕೆ ತಲುಪಿತು. ರಥ ಬೀದಿಯುದ್ದಕ್ಕೂ ತೇರಿಗೆ ಸುಮಂಗಲೆಯರು ಆರತಿ ಎತ್ತಿ ಸ್ವಾಗತಿಸಿ, ಭವಿಷ್ಯದ ಉನ್ನತಿಗೆ ಸಂಕಲ್ಪಗೈದರು.
ಬೆಳ್ಳಿ ತೇರು ವೀರಭದ್ರೇಶ್ವರ ದೇವಸ್ಥಾನಕ್ಕೆ ತಲುಪಿದ ನಂತರ ಅಲ್ಲಿ ಪಲ್ಲಕ್ಕಿಯೊಂದಿಗೆ ಅಗ್ನಿ ಪ್ರವೇಶ ಮಾಡಲಾಯಿತು. ಬೆಳಗಿನ ಜಾವ ರಥೋತ್ಸವದ ನಿಮಿತ್ತ ಪೂಜಾ ಕಾರ್ಯದಲ್ಲಿ ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಕುಟುಂಬಗಳು ಗುಗ್ಗಳ, ನಂದಿಕೋಲು, ದಿವಟಿಗೆ ಮತ್ತು ಹಡದಿ ಹಾಸುವ ಸೇವೆಗೈದರು. ಪುರವಂತಿಕೆ ಸೇವೆ ನಡೆಯಿತು.
ರಥೋತ್ಸವದಲ್ಲಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಕೊಣ್ಣೂರಿನ ಹೊರಗಿನಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಸೇರಿದಂತೆ ತಾಲೂಕಿನ ನಾನಾ ಮಠದ ಶ್ರೀಗಳು, ಭಕ್ತರು, ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.