ಮಹಿಳೆಯರಿಗೆ ಮಣೆಹಾಕದ ಮತದಾರ..!

election logo
Published on

ಸದೇಶ್ ಕಾರ್ಮಾಡ್ ಮೈಸೂರು
ಎಂದಿನಂತೆ ಈ ಬಾರಿಯೂ ಮಹಿಳೆಯರು ವಿಧಾನಸಭೆ ಚುನಾವಣೆಯ ಅಖಾಡದಲ್ಲಿ ಕಾಣಿಸಿಕೊಂಡರೂ ನಿರೀಕ್ಷಿತ ಪ್ರಮಾಣದಲ್ಲಿ ಮತ ಗಳಿಸಿ ಗಮನ ಸೆಳೆಯುವಲ್ಲಿ ವಿಫಲವಾಗಿದ್ದಾರೆ. ಈ ಬಾರಿಯೂ ಮತದಾರರು ಮಹಿಳಾ ಅಭ್ಯರ್ಥಿಗಳ ಕಡೆ ಹೆಚ್ಚಿನ ಒಲವು ತೋರಿಲ್ಲ.

ಈ ಬಾರಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಯಾವೊಂದು ಕ್ಷೇತ್ರದಲ್ಲೂ ಮಹಿಳೆಯರನ್ನು ಕಣಕ್ಕಿಳಿಸಲಿಲ್ಲ. ವಿವಿಧ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮಹಿಳೆಯರು ಕಣಕ್ಕಿಳಿದರೂ ಅವರಿಗೆ ನಿರೀಕ್ಷಿತ ಜನ ಬೆಂಬಲ ದೊರೆಯಲಿಲ್ಲ. ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಗಳಿಸಿ ಜನನಾಯಕಿಯಾಗಿ ರೂಪುಗೊಳ್ಳುವ ಭರವಸೆಯನ್ನು ಯಾರು ಮೂಡಿಸಲಿಲ್ಲ.

ಒಟ್ಟು 11 ಕ್ಷೇತ್ರಗಳ ಪೈಕಿ ಈ ಬಾರಿ 6 ಕ್ಷೇತ್ರಗಳಲ್ಲಿ ಮಾತ್ರ ಮಹಿಳೆಯರು ಸ್ಪರ್ಧಿಸಿದ್ದರು. ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ನಂಜನಗೂಡು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿಯುವ ಮನಸ್ಸು ಮಾಡಲಿಲ್ಲ. ಒಟ್ಟು 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಮಹಿಳೆಯರ ಸಂಖ್ಯೆ 12 ಮಾತ್ರ. ಇವರು ಒಟ್ಟು 5,927 ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೃಷ್ಣರಾಜ ಕ್ಷೇತ್ರದಲ್ಲಿ ಸ್ಪರ್ಧಿಸಿದ ಉತ್ತಮ ಪ್ರಜಾಕೀಯ ಪಾರ್ಟಿಯ ಎಸ್. ಸುಮಲತಾ ಮಾತ್ರ (1159 ಮತಗಳು) ನಾಲ್ಕಂಕಿ ಮತಗಳನ್ನು ಪಡೆದಿದ್ದಾರೆ. 10 ಅಭ್ಯರ್ಥಿಗಳು ಮೂರಂಕಿಗೆ, ಒಬ್ಬರು ಅಭ್ಯರ್ಥಿ ಎರಡಂಕಿಗೆ ಸೀಮಿತವಾಗಿದ್ದಾರೆ. ಸುಮಲತಾ ನಂತರದ ಸ್ಥಾನದಲ್ಲಿ ಚಾಮರಾಜ ಕ್ಷೇತ್ರದಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಪ್ರಭಾ ನಂದೀಶ್ (907) ಮತ್ತು ಆಮ್ ಆದ್ಮಿ ಪಾರ್ಟಿಯ ಮಾಲವಿಕ ಗುಬ್ಬಿವಾಣಿ 789 ಅತಿ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ. ಚಾಮರಾಜ ಕ್ಷೇತ್ರದ ಸೋಸಿಯಲಿಷ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾದ ಜಿ.ಎಸ್. ಸೀಮಾ (80 ಮತಗಳು) ಕಡಿಮೆ ಮತ ಪಡೆದ ಮಹಿಳಾ ಅಭ್ಯರ್ಥಿಯಾಗಿದ್ದಾರೆ.

ಮಹಿಳಾ ಅಭ್ಯರ್ಥಿಗಳು ಪಡೆದ ಮತಗಳೆಷ್ಟು?


ಚಾಮರಾಜ ಕ್ಷೇತ್ರದಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಪ್ರಭಾ ನಂದೀಶ್ 907 (ಶೇಕಡವಾರು ಪಡೆದ ಮತ 0.6), ಆಮ್ ಆದ್ಮಿ ಪಾರ್ಟಿಯ ಮಾಲವಿಕ ಗುಬ್ಬಿವಾಣಿ 789 (ಶೇ.0.52), ಸೋಸಿಯಲಿಷ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾದ (ಎಸ್‌ಯುಸಿಐ) ಜಿ.ಎಸ್. ಸೀಮಾ 80 (ಶೇ.0.05) ಮತಗಳನ್ನು ಪಡೆದುಕೊಂಡಿದ್ದಾರೆ.

ನರಸಿಂಹರಾಜದಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಲೀಲಾ ಶಿವಕುಮಾರ್ 786 (0.43), ಆಮ್ ಆದ್ಮಿ ಪಾರ್ಟಿಯ ಧರ್ಮಶ್ರೀ 696 (0.38), ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ರಿಹಾನಾ ಬಾನು 134 (0.07), ವರುಣದಲ್ಲಿ ಪಕ್ಷೇತರ ಅಭ್ಯರ್ಥಿ ಪ್ಯಾರಿ ಜಾನ್ 388 (0.19), ಎಚ್.ಡಿ. ಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಗಿರಿಜಾಂಬ 274 (0.15), ಕೃಷ್ಣರಾಜದಲ್ಲಿ ಉತ್ತಮ ಪ್ರಜಾಕೀಯ ಪಾರ್ಟಿಯ ಎಸ್. ಸುಮಲತಾ 1159 (0.77), ಆಮ್ ಆದ್ಮಿ ಪಾರ್ಟಿಯ ಜಯಶ್ರೀ 420 (0.28), ಸೋಸಿಯಲಿಷ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾದ ಪಿ.ಎಸ್. ಸಂಧ್ಯಾ 115 (0.08), ತಿ.ನರಸೀಪುರದಲ್ಲಿ ಕಂಟ್ರಿ ಸಿಟಿಜನ್ ಪಾರ್ಟಿಯ ಆರ್. ರೇಣುಕಾ ಸುರೇಶ್ 179 (0.11) ಮತಗಳನ್ನು ಪಡೆದಿದ್ದಾರೆ.

ಭರವಸೆ ಮೂಡಿಸಿದ ಹೊಸ ಪಕ್ಷಗಳು

ನೂತನ ಪಕ್ಷಗಳಾದ ಆಮ್ ಆದ್ಮಿ ಪಾರ್ಟಿ (ಆಪ್), ಉತ್ತಮ ಪ್ರಜಾಕೀಯ ಪಾರ್ಟಿ (ಯುಪಿಜೆಪಿ) ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಹೊಸ ರಾಜಕೀಯ ಅಧ್ಯಯನ ಬರೆಯುವ ಭರವಸೆ ಮೂಡಿಸಿತ್ತು. ಆದರೆ, ಈ ಪಕ್ಷಗಳು ಚುನಾವಣೆಯಲ್ಲಿ ಮತಗಳಿಕೆಯಲ್ಲಿ ಹಿಂದೆ ಬಿದ್ದಿವೆ.

ಹುಣಸೂರು ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ಜಿ. ರವಿಕುಮಾರ್ 2,912, ಕೆಆರ್‌ಎಸ್‌ನ ಎಮ್ಮೆಕೊಪ್ಪಲು ತಿಮ್ಮಭೋವಿ 761, ಯುಪಿಜೆಪಿಯ 654 ಮತಗಳನ್ನು ಪಡೆದಿದ್ದಾರೆ. ಕೆ.ಆರ್. ನಗರದಲ್ಲಿ ಆಪ್‌ನ ಮುರುಗೇಶ್ 1120, ಕೆಆರ್‌ಎಸ್‌ನ ಪರಮೇಶ 276, ಯುಪಿಜೆಪಿಯ ಕೆ. ಮೋಹನ್ 380, ನಂಜನಗೂಡಿನಲ್ಲಿ ಆಪ್‌ನ ಎಚ್. ಹನುಮಯ್ಯ 483, ಕೆಆರ್‌ಎಸ್‌ನ ಎಂ.ಪಿ. ವಿಜಯಕುಮಾರ್ 164, ಯುಪಿಜೆಪಿಯ ಪ್ರಭಾ ನಂದೀಶ್ 907, ವರುಣದಲ್ಲಿ ಆಪ್‌ನ ರಾಜೇಶ್ 564, ಕೆಆರ್‌ಎಸ್‌ನ ಎಂ. ರವಿಕುಮಾರ್ 220, ಯುಪಿಜೆಪಿಯ ಆರ್. ಮಹದೇವಸ್ವಾಮಿ 414, ಪಿರಿಯಾಪಟ್ಟಣದಲ್ಲಿ ಆಪ್‌ನ ರಾಜಶೇಖರ್ ದೊಡ್ಡಣ್ಣ 1,533, ಕೆಆರ್‌ಎಸ್‌ನ ಗುರುಮೂರ್ತಿ ಜೋಗನಹಳ್ಳಿ 716, ಯುಪಿಜೆಪಿಯ ಪಿ.ಎಸ್. ನವೀನ್ ಕುಮಾರ್ 506, ಎಚ್.ಡಿ. ಕೋಟೆಯಲ್ಲಿ ಯುಪಿಜೆಪಿಯ ಎಚ್.ಎಂ. ನಾಗೇಶ್ 567, ಕೆಆರ್‌ಎಸ್‌ನ ಎಚ್.ಎಂ. ಶಿವಪ್ಪ 200, ತಿ.ನರಸೀಪುರದಲ್ಲಿ ಆಪ್‌ನ ಎಂ. ಸಿದ್ದರಾಜು 568, ಕೆಆರ್‌ಎಸ್‌ನ ಎಂ.ಡಿ. ಮಂಜುನಾಥ 170 ಮತಗಳನ್ನು ಪಡೆದರು.

ಚಾಮರಾಜ ಕ್ಷೇತ್ರದಲ್ಲಿ ಆಪ್‌ನ ಮಾಲವಿಕ ಗುಬ್ಬಿವಾಣಿ 789, ಕೆಆರ್‌ಎಸ್‌ನ ಡಾ.ಪಿ.ಕೆ. ಪರಮೇಶ್ 287, ಯುಪಿಜೆಪಿಯ ಪ್ರಭಾ ನಂದೀಶ್ 907, ನರಸಿಂಹರಾಜದಲ್ಲಿ ಆಪ್‌ನ ಧರ್ಮಶ್ರೀ 696, ಕೆಆರ್‌ಎಸ್‌ನ ಸುಂದರ್ ಪ್ರೇಮ್ ಕುಮಾರ್ 196, ಯುಪಿಜೆಪಿಯ ಲೀಲಾ ಶಿವಕುಮಾರ್ 786, ಕೃಷ್ಣರಾಜದಲ್ಲಿ ಆಪ್‌ನ ವೈ.ಜಯಶಿಶ್ರ 420, ಯುಪಿಜೆಪಿಯ ಎಸ್. ಸುಮಲತಾ 1,159, ಕೆಆರ್‌ಎಸ್‌ನ ಕೆ.ಎಸ್. ಸೋಮಸುಂದರ್ 238 ಮತಗಳನ್ನು ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net