* ಸಂಸತ್ ಪ್ರವೇಶಿಸಿದ ಮನೋರಮಾ, ಶೋಭಾ : 72 ವರ್ಷದಲ್ಲಿ ಸ್ಪರ್ಧಿಸಿದ್ದು ಕೇವಲ 7 ಮಹಿಳೆಯರು

shobhaaa
Published on



* ಪಿ.ಬಿ.ಹರೀಶ್ ರೈ

ಮಂಗಳೂರು : ದಕ್ಷಿಣ ಕನ್ನಡ (ಹಿಂದಿನ ಮಂಗಳೂರು ) ಕ್ಷೇತ್ರದಲ್ಲಿ ಕಳೆದ 72 ವರ್ಷದಲ್ಲಿ ಲೋಕಸಭೆಗೆ ಕೇವಲ ಮೂವರು ಮಹಿಳೆಯರು ಮಾತ್ರ ಸ್ಪರ್ಧಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಇದುವರೆಗೆ ನಾಲ್ವರು ಮಹಿಳೆಯರು ಸ್ಪರ್ಧಿಸಿದ್ದು ಇಬ್ಬರು ಸಂಸತ್ ಪ್ರವೇಶಿಸಲು ಯಶಸ್ವಿಯಾಗಿದ್ದಾರೆ.
ಮಂಗಳೂರು ಕ್ಷೇತ್ರದಲ್ಲಿ 1989ರಲ್ಲಿ ನಡೆದ ಚುನಾವಣೆಯಲ್ಲಿ ಐವರು ಪಕ್ಷೇತರರು ಸಹಿತ ಒಟ್ಟು 9 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಪಕ್ಷೇತರರ ಪೈಕಿ ಪ್ಲೊಸಿ .ವಿ.ಪಿರೇರಾ ಮತ್ತು ಗರ್ಟಿ ಸುವರ್ಣ ಮಹಿಳಾ ಅಭ್ಯರ್ಥಿಗಳಾಗಿದ್ದರು. ಪ್ರಥಮವಾಗಿ
ಲೋಕಸಭೆಗೆ ಸ್ಪರ್ಧಿಸಿದ ಇಬ್ಬರು ಮಹಿಳೆಯರು ಠೇವಣಿ ಕಳಕೊಂಡಿದ್ದರು.
* ಕಾಂಗ್ರೆಸ್ ಸೋಲಿಸಿದ ಲೋಕೇಶ್ವರಿ
1999ರ ಚುನಾವಣೆಯಲ್ಲಿ ಬೆಳ್ತಂಗಡಿಯ ಲೋಕೇಶ್ವರಿ ವಿನಯಚಂದ್ರ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದು ಕಾಂಗ್ರೆಸ್ ಸೋಲಿಗೆ ಮುಖ್ಯ ಕಾರಣವಾಗಿತ್ತು. ಕಾಂಗ್ರೆಸ್‌ನಲ್ಲಿದ್ದ ಲೋಕೇಶ್ವರಿ ಅವರು ಜೆಡಿಎಸ್‌ನಿಂದ ಕಣಕ್ಕಿಳಿದು 20,980 ಮತ ಗಳಿಸಿದ್ದರು. ಮೂವರು ಅಭ್ಯರ್ಥಿಗಳು ಮಾತ್ರ ಸ್ಪರ್ಧಿಸಿದ್ದ ಈ ಚುನಾವಣೆಯಲ್ಲಿ ಬಿಜೆಪಿಯ ವಿ.ಧನಂಜಯ ಕುಮಾರ್ ಅವರು ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ಅವರ ವಿರುದ್ಧ ಕೇವಲ 8,469 ಮತಗಳ ಅಂತರದ ಜಯ ಸಾಧಿಸಿದ್ದರು. ಲೋಕೇಶ್ವರಿ ಅವರು ಠೇವಣಿ ಕಳಕಂಡರೂ ಫಲಿತಾಂಶ ಏರುಪೇರು ಮಾಡುವ ಮತಗಳಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು
ಯಶಸ್ವಿಯಾಗಿದ್ದರು.
* ಬಿಜೆಪಿ ಸೇರಿ ಗೆದ್ದ ಮನೋರಮ
ಉಡುಪಿ ಕ್ಷೇತ್ರದಲ್ಲಿ 1977ರ ಚುನಾವಣೆಯಲ್ಲಿ ಯಶೋಧ.ಎಸ್.ಅರ್ಮುಗಂ ಅವರು ಪಕ್ಷೇತರ ಅಭ್ಯರ್ಥಿಯಾಗಿ 17,784 ಮತಗಳಿಸಿದ್ದರು. ಕಾಂಗ್ರೆಸ್‌ನಲ್ಲಿ ಶಾಸಕಿಯಾಗಿ, ಸಚಿವೆಯಾಗಿ ಸುದೀರ್ಘ ಕಾಲ ಕಾರ್ಯ ನಿರ್ವಹಿಸಿದ್ದ ಮನೋರಮಾ ಮಧ್ವರಾಜ್ ಅವರು 2004ರ ಚುನಾವಣೆಯಲ್ಲಿ ಬಿಜೆಪಿ ಸೇರಿ ಲೋಕಸಭೆಗೆ ಅಭ್ಯರ್ಥಿಯಾದರು. ಕಾಂಗ್ರೆಸ್‌ನ ವಿನಯಕುಮಾರ್ ಸೊರಕೆ ಅವರನ್ನು 29 ಸಾವಿರ ಮತಗಳ ಅಂತರದಿಂದ ಸೋಲಿಸಿ ಸಂಸತ್ ಪ್ರವೇಶಿಸಿದರು.
* ಎರಡು ಬಾರಿ ಗೆದ್ದ ಕರಂದ್ಲಾಜೆ
ಕ್ಷೇತ್ರ ಪುನರ ವಿಂಗಡಣೆಯಾಗಿ ರಚನೆಯಾದ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ 2009ರಲ್ಲಿ ನಡೆದ ಚುನಾವಣೆಯಲ್ಲಿ ಸಿಪಿಐ ಪಕ್ಷದಿಂದ ರಾಧಾ ಸುಂದರೇಶ್ ಸ್ಪರ್ಧಿಸಿದ್ದರು. 24, 991 ಮತ ಗಳಿಸಿದ ರಾಧಾ ಸುಂದರೇಶ್ ಒಟ್ಟು 9 ಅಭ್ಯರ್ಥಿಗಳ ಪೈಕಿ ತೃತೀಯ ಸ್ಥಾನಿಯಾಗಿದ್ದರು. 2014ರ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿದ ಬಿಜೆಪಿ ಶೋಭಾ ಕರಂದ್ಲಾಜೆ ಅವರಿಗೆ ಅವಕಾಶ ಕಲ್ಪಿಸಿತು. 1.81 ಲಕ್ಷ ಮತಗಳ ಅಂತರದ ಜಯ ಸಾಧಿಸಿದ ಶೋಭಾ ಅವರು ಸಂಸತ್ ಪ್ರವೇಶಿಸಿದರು. 2019ರ ಚುನಾವಣೆಯಲ್ಲಿ
ಮತ್ತೆ ಸ್ಪರ್ಧಿಸಿದ ಅವರು 3.49 ಮತಗಳ ಅಂತರದ ಭರ್ಜರಿ ಜಯ ಸಾಧಿಸಿದರು.
* ಇಂದಿರಾ ಗಾಂಧಿ ಸ್ಪರ್ಧೆ
1978ರಲ್ಲಿ ನಡೆದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಸ್ಪರ್ಧಿಸಿದ್ದರು. ಆಗ ಅವಿಭಜಿತ ದ.ಕ.ಜಿಲ್ಲೆಯ ಬೆಳ್ತಂಗಡಿ ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಈ ಎರಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮತದಾರರಿಗೆ ಇಂದಿರಾ ಗಾಂಧಿ ಅವರಿಗೆ ಮತ ಚಲಾಯಿಸುವ ಅಪೂರ್ವ ಅವಕಾಶ ಒದಗಿತ್ತು. ಉಪ ಚುನಾವಣೆಯಲ್ಲಿ ಜಯ ಪಡೆದ ಇಂದಿರಾ ಗಾಂಧಿ ಅವರು ರಾಜಕೀಯ ಮರು ಹುಟ್ಟು ಪಡೆದರು. ಕಾಂಗ್ರೆಸ್‌ನ ಡಿ.ಕೆ.ತಾರಾದೇವಿ ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net