'ಚೌಕಟ್ಟು ದಾಟಿದರೆ ಹೆಣ್ಣಿಗೆ ಜೀವನಾನುಭವ ಸಾಧ್ಯ'

10
Published on

ಮೈಸೂರು: ಹೆಣ್ಣು ಮಕ್ಕಳು ಸುರಕ್ಷಿತ ಗೋಡೆಯ ಆಸರೆಯಿಂದ ಹೊರ ಬಂದು ಹೊರ ಜಗತ್ತಿಗೆ ತೆರೆದುಕೊಂಡಾಗಲೇ ಬದುಕಿನಲ್ಲಿ ಗಟ್ಟಿತನ ಬರಲಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕ್ಕಮಹಾದೇವಿ ಅಧ್ಯಯನ ಪೀಠದ ನಿರ್ದೇಶಕಿ ಪ್ರೊ. ಕವಿತಾ ರೈ ಹೇಳಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜಿನಲ್ಲಿ ಜೆಎಸ್‌ಎಸ್ ಕಾಲೇಜು ಮಹಿಳಾ ವಿದ್ಯಾರ್ಥಿ ನಿಲಯದ ವೇದಿಕೆ ಉದ್ಘಾಟನೆ ಮತ್ತು ಅಂತರ ಮಹಿಳಾ ವಿದ್ಯಾರ್ಥಿ ನಿಲಯಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬದೊಳಗೆ ರಕ್ಷಣಾ ಗೋಡೆಯನ್ನು ಕಟ್ಟಿಕೊಂಡು ಸುರಕ್ಷಿತವಾಗಿರಲು ಹೆಚ್ಚು ಮಕ್ಕಳು ಪ್ರಯತ್ನಿಸುತ್ತಾರೆ. ಆದರೆ, ಅದು ಭವಿಷ್ಯದ ಬದುಕಿಗೆ ಪರಿಣಾಮಕಾರಿಯಾಗಿ ಆಸರೆಯಾಗಲಾರದು. ಹೊರ ಜಗತ್ತಿಗೆ ತೆರೆದುಕೊಂಡಾಗಲೇ ಗಟ್ಟಿತನ ಬಂದು ಬದುಕಿನ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವುದು ಎಂದು ಹೇಳಿದರು.
ವಿದ್ಯಾರ್ಥಿ ನಿಲಯದ ಬದುಕು ಹೆಣ್ಣು ಮಕ್ಕಳಿಗೆ ಹಲವು ಪಾಠಗಳನ್ನು ಕಲಿಸುತ್ತದೆ. ಹೊಂದಾಣಿಕೆ, ಧೈರ್ಯ, ಸ್ವಾವಲಂಬನೆ, ಸಹಬಾಳ್ವೆ, ಏಕಾಗ್ರತೆ, ಅಧ್ಯಯನದಲ್ಲಿ ಶ್ರದ್ಧೆ ಮೊದಲಾದ ಅತ್ಯುತ್ತಮ ಗುಣಗಳನ್ನು ರೂಢಿಸುತ್ತದೆ. ಹೆಣ್ಣಿನಲ್ಲಿ ಛಲ ಆತ್ಮಸ್ಥೈರ್ಯ ಮತ್ತು ಅದಕ್ಕೆ ತಕ್ಕಂತೆ ಪರಿಶ್ರಮವಿದ್ದರೆ ಸಾಧಕರಾಗಬಹುದು ಎಂಬುದಕ್ಕೆ ನಮ್ಮ ದೇಶದ ಮಾನ್ಯ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರೇ ಜೀವಂತ ನಿದರ್ಶನ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ ಮಾತನಾಡಿ, ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕು. ವಸತಿ ನಿಲಯದ ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ನಡುವೆ ಬಂಧಿಯಾಗದೆ, ಇತರ ವಿದ್ಯಾರ್ಥಿಗಳ ಜತೆ ಸಾಂಸ್ಕೃತಿಕವಾಗಿ ಬೆರೆಯುವ ಮೂಲಕ ಪ್ರಾಪಂಚಿಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಡಾ. ಎಂ. ಪ್ರಭು, ಡಾ. ಬಿ.ಎಸ್. ಸುದೀಪ್, ವಸತಿ ನಿಲಯದ ನಿಲಯಪಾಲಕಿ ಕೆ.ಜಿ. ಅನಿತಾ ಇತರರು ಇದ್ದರು.
ಬಾಕ್ಸ್
ವಿವಿಧ ಸ್ಪರ್ಧೆ ವಿಜೇತರು
ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿನಿಯರಿಗಾಗಿ ಭಾವಗೀತೆ, ಪ್ರಬಂಧ, ಶೆಟಲ್ ಬ್ಯಾಡ್ಮಿಂಟನ್ ಮತ್ತು ಥ್ರೋಬಾಲ್ ಸ್ಪರ್ಧೆಗಳು ನಡೆದವು. ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ಜೆಎಸ್‌ಎಸ್ ಕಾನೂನು ಮಹಿಳಾ ವಸತಿನಿಲಯದ ಎಸ್. ವೈಷ್ಣವಿ (ಪ್ರಥಮ), ಡಿ. ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಸಿ.ಆರ್. ದೇವಿಕಾ (ದ್ವಿತೀಯ), ಹಿಂದುಳಿದ ವರ್ಗಗಳ ಮಹಿಳಾ ವಿದ್ಯಾರ್ಥಿನಿಲಯ ಕುವೆಂಪು ನಗರದ ಕೆ.ಎಂ. ಚಂದನಾ (ತೃತೀಯ) ಬಹುಮಾನ ಪಡೆದರು. ಪ್ರಬಂಧ ಸ್ಪರ್ಧೆಯಲ್ಲಿ ಡಿ. ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಸಿ.ಆರ್. ದೇವಿಕಾ (ಪ್ರಥಮ), ತೇಜಸ್ವಿನಿ (ದ್ವಿತೀಯ), ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜು ಮಹಿಳಾ ವಿದ್ಯಾರ್ಥಿನಿಲಯದ ವೈಷ್ಣವಿ ಎಂ. ಶಿರನಾಳ್ (ತೃತೀಯ) ಬಹುಮಾನ ಪಡೆದರೆ, ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಜೆಎಸ್‌ಎಸ್ ಕಾಲೇಜು ಮಹಿಳಾ ವಿದ್ಯಾರ್ಥಿನಿಲಯದ ಸಿ.ವೈ. ಸಿಂಚನ ಮತ್ತು ಎಂ.ಎಂ. ತನುಷ ತಂಡ (ಪ್ರಥಮ), ಜೆಎಸ್‌ಎಸ್ ಕಾನೂನು ಮಹಿಳಾ ವಿದ್ಯಾರ್ಥಿನಿಲಯದ ಸಿ.ಎ.ಶ್ರೇಯಾ ಮತ್ತು ನಂದ ಹಟಿಕಲ್ ತಂಡ (ದ್ವಿತೀಯ), ಜೆಎಸ್‌ಎಸ್ ಕಾಲೇಜು ಮಹಿಳಾ ವಿದ್ಯಾರ್ಥಿ ನಿಲಯದ ವಂಶಿಕ ಮತ್ತು ಆರ್. ಎಸ್. ಕಷ್ಣ ತಂಡ (ತೃತೀಯ) ಬಹುಮಾನ ತಮ್ಮದಾಗಿಸಿಕೊಂಡರು. ಥ್ರೋಬಾಲ್ ಸ್ಪರ್ಧೆಯಲ್ಲಿ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜು ಮಹಿಳಾ ವಿದ್ಯಾರ್ಥಿನಿಲಯ ತಂಡ ಪ್ರಥಮ, ಜೆಎಸ್‌ಎಸ್ ಕಾನೂನು ಮಹಿಳಾ ವಿದ್ಯಾರ್ಥಿನಿಲಯದ ತಂಡಗಳು ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net