

ನಂಜನಗೂಡು: ಕಡುಬಡತನದಲ್ಲಿರುವ ಮಹಿಳೆಯರು ಸಮಾಜದಲ್ಲಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಗ್ರೇಡ್-2 ತಹಸೀಲ್ದಾರ್ ಮಹೇಶ್ ಪಾಟೀಲ್ ಕರೆ ನೀಡಿದರು.
ತಾಲೂಕಿನ ಹದಿನಾರು ಗ್ರಾಮದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಸಭಾಂಗಣದಲ್ಲಿ ಬುಧವಾರ ಐಟಿಸಿ ಮತ್ತು ಬಂಧನ್ ಕೊನ್ನಗರ್ ಟಿಎಚ್‌ಪಿ ವತಿಯಿಂದ ಆಯೋಜಿಸಿದ್ದ ಮಹಿಳೆಯರಿಗೆ ಉಚಿತ ಪರಿಕರಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರಿಗೆ ಉದ್ಯೋಗಾವಕಾಶಗಳನ್ನು ನೀಡಬೇಕು. ಹಾಗಾಗಿ ಐಟಿಸಿ ಮತ್ತು ಬಂಧನ್ ಕೊನ್ನಗರ್ ಸಂಸ್ಥೆಯವರು ಬಡತನದಲ್ಲಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಸ್ವಾವಲಂಬಿ ಜೀವನವನ್ನು ನಡೆಸಲು ಟೈಲರಿಂಗ್ ತರಬೇತಿಯನ್ನು ನೀಡಿ, ಹೊಲಿಗೆ ಯಂತ್ರ, ತಳ್ಳುವ ಗಾಡಿ, ದಿನಸಿ ಅಂಗಡಿಗೆ ಬೇಕಾದ ದವಸ ಧಾನ್ಯಗಳ ವಸ್ತುಗಳು, ಪಾತ್ರೆ ಅಂಗಡಿಗೆ ಬೇಕಾದ ಪಾತ್ರೆಗಳ ಸಾಮಗ್ರಿಗಳು ಸೇರಿದಂತೆ ವಿವಿಧ ಬಗೆಯ ಪರಿಕರಗಳನ್ನು ಮಹಿಳೆಯರಿಗೆ ನೀಡಿ ಅವರ ಬದುಕಿಗೆ ಆಶ್ರಯವಾಗುತ್ತಿದ್ದಾರೆ. ಮಹಿಳೆಯರು ಇದರ ಸದುಪಯೋಗವನ್ನು ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡುಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಐಟಿಸಿ ಸಂಸ್ಥೆ ಮೇಲ್ವಿಚಾರಕ ಮನೋಜ್ ಮಾತನಾಡಿ, ದೇಶದಲ್ಲಿ ಸುಮಾರು 20 ರಾಜ್ಯಗಳಲ್ಲಿ ಐಟಿಸಿ ಸಂಸ್ಥೆಯು ಜನಪರ ಕಾರ್ಯಗಳನ್ನು ಮಾಡುವ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಶಾಲೆಗಳ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ಕೆರೆಗಳ ಹೂಳೆತ್ತುವ ಕಾರ್ಯಕ್ರಮ, ಪರಿಸರ ಸಂರಕ್ಷಣೆ ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆ ಮಾಡುವ ಬಗ್ಗೆ ನಿರಂತರವಾಗಿ ಸಂಸ್ಥೆಯು ಕೆಲಸ ಮಾಡಿಕೊಂಡು ಬರುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಮಾದರಿ ಗ್ರಾಮ ಪಂಚಾಯಿತಿ ಮಾಡಲು ಸಂಸ್ಥೆ ಶ್ರಮಿಸುತ್ತಿದೆ. ಪ್ರತಿ ಗ್ರಾಮಗಳಲ್ಲಿ ಅಂಗವಿಕಲರು ಮತ್ತು ಬಡತನದಲ್ಲಿರುವ ಜನರನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನಡೆಸಿ ಅವರಿಗೆ ಬದುಕು ಸಾಗಿಸಲು ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತಿದೆ. ಸಂಸ್ಥೆಯಿಂದ ಸುಮಾರು 600ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಉಚಿತವಾಗಿ ಅವರಿಗೆ ಎಲ್ಲ ಪರಿಕರಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಸುಮಾರು 50ಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ರೆಡಿಮೇಡ್ ಉಡುಪುಗಳು, ಸೌಂದರ್ಯ ವರ್ಧಕಗಳು, ದಿನಸಿ ವಸ್ತುಗಳು, ಬ್ಯಾಗ್ ಮೇಕಿಂಗ್, ಫಾಸ್ಟ್‌ಫುಡ್, ತಳ್ಳುವ ಗಾಡಿ, ಪಾತ್ರೆ ಸೇರಿದಂತೆ ವಿವಿಧ ಪರಿಕರಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಐಟಿಸಿ ಸಂಸ್ಥೆಯ ಮುಖ್ಯಸ್ಥರಾದ ವಿಜಯ್ ಸಿಂಗ್, ಕಾರ್ಯನಿರ್ವಾಹಕ ಅಧಿಕಾರಿ ಮಂಜು, ಹಿರಿಯ ಮೇಲ್ವಿಚಾರಕರಾದ ಮನೋಜ್, ಹದಿನಾರು ಗ್ರಾ.ಪಂ. ಅಧ್ಯಕ್ಷೆ ಸಣ್ಣತಾಯಮ್ಮ, ಬಿಳಿಗೆರೆ ಗ್ರಾ.ಪಂ. ಅಧ್ಯಕ್ಷೆ ರಾಜಮ್ಮ, ಕೆಂಪಿಸಿದ್ದನಹುಂಡಿ ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ, ಮುಖಂಡ ಪುನೀತ್‌ಕುಮಾರ್, ಬಂಧನ್ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ದೀಪಕ್ ದಾಸ್, ಸಮುದಾಯ ಅಧಿಕಾರಿ ಮಂಜುನಾಥ್, ಸಂಯೋಜಕ ಮುಸ್ತಕಿನ್ ಇದ್ದರು.