ಸ್ತ್ರೀಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲಿ

BLY- 30-2
ಬಳ್ಳಾರಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬುಧವಾರ ಗೃಹಲಕ್ಷ್ಮೀ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಚಾಲನೆ ನೀಡಿದರು
Published on

ಬಳ್ಳಾರಿ : ಪ್ರತಿ ಬಡ ಕುಟುಂಬದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕಿದೆ ಎಂದು ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಹೇಳಿದರು.

ನಗರದ ಡಾ.ರಾಜ್‌ಕುಮಾರ್ ರಸ್ತೆಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನಗರಾಭಿವೃದ್ಧಿ ಕೋಶ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಸರ್ಕಾರವು ರಾಜ್ಯದ ಮಹಿಳೆಯರ ಮತ್ತು ತಾಯಂದಿರ ಕುಟುಂಬದ ನಿರ್ವಹಣೆಯ ಕಷ್ಟವನ್ನರಿತು ಗೃಹಲಕ್ಷ್ಮೀ ಯೋಜನೆ ರೂಪಿಸಿದೆ. ಮನೆಯಲ್ಲಿ ಯಾವ ಹೆಣ್ಣು ಸಂತೋಷದಿಂದ ಇರುತ್ತಾಳೆಯೋ, ಆ ಮನೆಯ ಕುಟುಂಬ ಬೆಳಗುತ್ತದೆ. ಕುಟುಂಬದ ನಿರ್ವಹಣೆಗೆ ಬೇಕಾದ ಅಗತ್ಯ ಸೇವೆಗಳನ್ನು ಪಡೆಯಲು, ಕುಟುಂಬದ ನಿರ್ವಹಣೆಗೆ ಬೇಕಾದ ಸಾಮಗ್ರಿ ಕೊಂಡುಕೊಳ್ಳಲು, ಆಸ್ಪತ್ರೆಯ ಖರ್ಚಿಗೆ, ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಇತರ ಸೌಲಭ್ಯ ಹೊಂದಲು ಸಹಾಯವಾಗುತ್ತದೆ ಎಂದು ಹೇಳಿದರು.

ಶಕ್ತಿ ಯೋಜನೆಯಿಂದ ದೂರದ ಆಸ್ಪತ್ರೆಗಳಿಗೆ ಹೋಗಿ ಬರಲು, ರಾಜ್ಯದ ದೇವಸ್ಥಾನಗಳಿಗೆ ಭೇಟಿ ನೀಡಲು ಹಾಗೂ ಹೆಣ್ಣುಮಕ್ಕಳು ತಮ್ಮ ತವರು ಮನೆಗೆ ಹೋಗಿ ಬರಲು ಉಪಯೋಗವಾಗಿದೆ. ಅನ್ನಭಾಗ್ಯ ಯೋಜನೆಯಿಂದ ಹಸಿವುಮುಕ್ತ ರಾಜ್ಯವನ್ನಾಗಿಸಲು ಸಹಕಾರಿಯಾಗಿದೆ. ಗೃಹ ಜ್ಯೋತಿಯಿಂದ ಮನೆ ಬೆಳಗುತ್ತಿವೆ ಎಂದರು.

ಇಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರೆತಿದೆ. ರಾಜ್ಯದ ಇತಿಹಾಸದಲ್ಲಿಯೇ ಈ ದಿನ ಅತ್ಯಂತ ಮಹತ್ವದ ದಿನವಾಗಿದೆ. ನಮ್ಮ ಸರ್ಕಾರ ಜಾರಿಗೆ ಬಂದು 100 ದಿನ ಪೂರೈಸಿದ್ದು, ನಮ್ಮ ಸಾಧನೆ ನಮ್ಮ ಕಾರ್ಯಗಳನ್ನು ಜನರ ಮುಂದೆ ಇಡುವ ಮೂಲಕ ಬಡವರ ಪರ ಸರ್ಕಾರ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ. ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ಐದು ಯೋಜನೆಗಳಲ್ಲಿ ನಾಲ್ಕು ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯ ಅರ್ಹ ಫಲಾನುಭವಿ ಮಹಿಳೆಯರಿಗೆ ಆಗಸ್ಟ್ ಮಾಹೆಯಲ್ಲಿ ಹಣ ಬಿಡುಗಡೆಯಾಗಿದೆ. ಪರಿಶಿಷ್ಟ ಜಾತಿಯ 47,202 ಫಲಾನುಭವಿಗಳಿಗೆ 9.44 ಕೋಟಿ ರೂ., 48,133 ಎಸ್‌ಟಿ ಫಲಾನುಭವಿಗಳಿಗೆ 9.62 ಕೋಟಿ ರೂ. ಇತರ ವರ್ಗದ 1,52,092 ಫಲಾನುಭವಿಗಳಿಗೆ 30.41 ಕೋಟಿ ರೂ. ವೆಚ್ಚ ಆಗಲಿದೆ. ಜಿಲ್ಲೆಯಲ್ಲಿ 2,47,427 ಫಲಾನುಭವಿಗಳಿಗೆ 49.48 ಕೋಟಿ ರೂ. ಹಣ ಪಾವತಿಯಾಗಲಿದೆ ಎಂದು ಮಾಹಿತಿ ನೀಡಿದರು.

ಗೃಹಲಕ್ಷ್ಮೀ ಯೋಜನೆಯು ಆರಂಭದಿಂದ ಇಲ್ಲಿಯವರೆಗೆ 3,01,180 ರೇಷನ್ ಕಾರ್ಡ್‌ಗಳ ಪೈಕಿ 2,59,161 (ಶೇ.86.05) ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ ರಾಜ್ಯದಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ಜಿಲ್ಲೆಯು ಐದನೇ ಸ್ಥಾನದಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳ್ಳಾರಿ ನಗರ ಶಾಸಕ ನಾರಾ ಭರತ್‌ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಮತೀಯ ಭಾಂದವ್ಯ ಇಲ್ಲದೆ ನಗರದ ಎಲ್ಲರಿಗೂ ತಲುಪಿಸಲಾಗುತ್ತಿದೆ. ಅದರಂತೆಯೇ ನಗರದಲ್ಲಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ತಲುಪಿಸಲಾಗುತ್ತದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಅವರು ಮಾತನಾಡಿದರು. ಉಪ ಮೇಯರ್ ಬಿ.ಜಾನಕಿ, ಮಾಜಿ ಮೇಯರ್ ಎಂ.ರಾಜೇಶ್ವರಿ, ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net