ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರೇ ಪ್ರಬಲ: ಹಿರಿಯ ಕವಿ ಬಿ.ಆರ್​.ಲಕ್ಷ್ಮಣರಾವ್​ ಅಭಿಮತ

book
Published on

ಬೆಂಗಳೂರು: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರೇ ಹೆಚ್ಚು ಪ್ರಬಲಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹಿರಿಯ ಕವಿ ಬಿ.ಆರ್​. ಲಕ್ಷ್ಮಣರಾವ್​ ಅಭಿಪ್ರಾಯಪಟ್ಟಿದ್ದಾರೆ.

ನ್ಯೂ ವೇವ್​ ಬುಕ್ಸ್​ ಪ್ರಕಾಶನ ಭಾನುವಾರ ಅಶ್ವತ್ಥ ಕಲಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಸ್ಯ ಲೇಖಕಿ ನಳಿನಿ ಟಿ.ಭೀಮಪ್ಪ ರಚಿಸಿದ "ಚಿತ್ತ-ಬಕ್ಕ', "ಐಸ್​ಪೈಸ್​' ಮತ್ತು ಕಥೆಗಾರ್ತಿ ಸುಮಾ ರಮೇಶ್​ ಬರೆದಿರುವ " ಅಮಟೆ....ಎಸ್​' ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ತಮ್ಮ ಹಕ್ಕು ಬಗ್ಗೆ ಹೇಳಿಕೊಳ್ಳುವುದಕ್ಕೆ ಮಹಿಳೆಯರಿಗೆ ಸಾಧ್ಯವಾಗಿರಲಿಲ್ಲ. ಈಗಿನ ಕಾಲಟ್ಟದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ತಮ್ಮ ಹಕ್ಕಗಳ ಬಗ್ಗೆ ಮಾತನಾಡುವುದಕ್ಕೆ ಸ್ತ್ರೀಯರಿಗೆ ಅವಕಾಶ ಇದೆ. "ಸ್ತ್ರೀವಾದ ಎಂದರೆ ಬರೀ ಸ್ತ್ರೀಯರಿಗೆ ಸಂಬಂಧಿಸಿದಲ್ಲ, ಬದಲಾಗಿ ಪುರುಷನು ಸಹ ತಮ್ಮ ತಮ್ಮ ಲೋಪ, ದೌರ್ಬಲ್ಯವನ್ನು ಒಪ್ಪಿಕೊಳ್ಳಬೇಕು'.ಹೆಂಡತಿಗೆ ಸಮಯ ಕೊಡಬೇಕು ಎಂಬುದನ್ನು ಸಾಹಿತ್ಯ ನನಗೆ ಕಲಿಸಿದೆ. ಹಾಗಾಗಿ, ಎಲ್ಲ ಕಾರ್ಯಕ್ರಮಕ್ಕೂ ನನ್ನ ಪತ್ನಿಯನ್ನು ಕರೆದೊಯ್ಯುತ್ತೇನೆ. ಸಹ ಜೀವನ ಮೌಲ್ಯವನ್ನು ಕಲಿಸುತ್ತದೆ ಎಂದರು.

ಅಂಕಣಕಾರ ಅಣಕು ರಾಮನಾಥ್​ ಮಾತನಾಡಿ, ಹಾಸ್ಯ ಲೇಖಕಿಯರು ಹಾಸ್ಯ ಕೃತಿಯಲ್ಲಿ ವೈದ್ಯರ ಭೇಟಿ ಪ್ರಸಂಗಗಳು, ಹಾಟ್​ಸೀಟ್​ ಸೇರಿ ಇತರೆ ವಿಚಾರಗಳ ಕುರಿತು ಚೆನ್ನಾಗಿ ವಿಶ್ಲೇಷಿಸಿದ್ದಾರೆ. ವಿಷಯಗಳ ವಿಸ್ತಾರ, ಆಯ್ಕೆ, ಭಾಷೆ ಹಿಡಿತ ಮತ್ತು ಪದ ವರ್ತುಲ ಕೌಶಲ ಲೇಖಕಿಯರಿಗೆ ಇದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ, ರಂಗಕರ್ಮಿ ಧಾರಿಣಿ ಮಾಯಾ ಮತ್ತಿತರರಿದ್ದರು .

ಮಹಿಳೆಯರು ಅನುಭವಿಸಿದ ಪೋಷಕತ್ವ ಸವಾಲು ಕುರಿತು "ಚಿತ್ತ-ಬಕ್ಕ'ಪುಸ್ತಕದಲ್ಲಿ ಪ್ರಸ್ತಾಪಿಸಿದ್ದೇನೆ. "ಐಸ್​ಪೈಸ್​' ಕೃತಿಯಲ್ಲಿ 37 ಹಾಸ್ಯ ಲೇಖನಗಳಿವೆ. ಶಾಲಾ-ಕಾಲೇಜಿನಲ್ಲಿ ಬರವಣಿಗೆ ಹವ್ಯಾಸ ಇರಲಿಲ್ಲ. ಆದರೆ, ನಾನು ಒಳ್ಳೆಯ ಓದುಗನಾಗಿದ್ದೆ. ಆಕಸ್ಮಿಕವಾಗಿ ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದು, ಬರವಣಿಗೆ ಮೂಲಕ ಹಾಸ್ಯ ಲೇಖನ ಬರೆಯುತ್ತಿದ್ದೇನೆ. ಎಲ್ಲರ ಪೋತ್ಸಾಹದಿಂದ ಕೃತಿ ರಚಿಸಲು ಶಕ್ತಿ ಸಿಕ್ಕಿದೆ. ಪುಸ್ತಕಗಳ ಬಗ್ಗೆ ಓದುಗರ ಅಭಿಪ್ರಾಯಕ್ಕಾಗಿ ಕಾತರದಿಂದ ಕಾಯುತ್ತಿದ್ದೇನೆ.

| ನಳಿನಿ ಟಿ.ಭೀಮಪ್ಪ, ಹಾಸ್ಯ ಲೇಖಕಿ.

ಕೃತಿ ಬಿಡುಗಡೆ ಎನ್ನುವುದು ಪ್ರಸವ ಇದ್ದಂತೆ. ಅಮಟೆ....ಎಸ್​' 4ನೇ ಕೃತಿಯಾಗಿದೆ. ಇದರಲ್ಲಿ 40 ಹಾಸ್ಯ ಲೇಖನಗಳಿವೆ. ಬದುಕು ಎಂಬುದು "ಕುಂಟೆ ಬಿಲ್ಲೆ' ಇದ್ದಂತೆ. ಎಲ್ಲ ಸವಾಲುಗಳನ್ನು ದಾಟಿ ಬದುಕು ನಡೆಸಬೇಕು. ಹವ್ಯಾಸಿಯಾಗಿ ಪ್ರಾರಂಭಿಸಿದ್ದ ಬರವಣಿಗೆಯು ನನಗೆ ಎಲ್ಲ ಕೊಟ್ಟಿದೆ. ಪ್ರಾರಂಭದಲ್ಲಿ ಕೌಟುಂಬಿಕ ವಿಷಯ ಕುರಿತು ಬರೆಯುತ್ತಿದ್ದೆ. ಈಗ ವೈವಿಧ್ಯಮಯ ವಿಚಾರಗಳ ಒಳಗೊಂಡ ಕೃತಿ ರಚಿಸಿದ್ದೇನೆ.

| ಸುಮಾ ರಮೇಶ್​, ಕಥೆಗಾರ್ತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net