ಸಂಸ್ಕೃತಿ ಉಳಿಸುವ ಹೊಣೆ ಮಹಿಳೆಯರ ಮೇಲಿದೆ

Women are responsible for preserving culture.
ಜಮಖಂಡಿ ನಗರದ ಓಲೇಮಠದಲ್ಲಿ ಜರುಗುತ್ತಿರುವ ವಚನ ಜಾತ್ರಾ ಮಹೋತ್ಸವದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿದರು. ಬಸವರಾಜ ಉಮರಾಣಿ, ಗುರುಸಿದ್ಧೇಶ್ವರ ಶ್ರೀಗಳು, ಆನಂದ ದೇವರು, ಸುಶೀಲಕುಮಾರ ಬೆಳಗಲಿ, ರಜನಿ ಕರಡಿ, ಮೋನಿಕಾ ಹಿರೇಮಠ ಮತ್ತಿತರರಿದ್ದಾರೆ.
Published on

ಜಮಖಂಡಿ: ಹೆಣ್ಣು ಮಕ್ಕಳಿಗೆ ಕಷ್ಟಗಳನ್ನು ಮೆಟ್ಟಿನಿಂತು ಬದುಕನ್ನು ಜಯಿಸುವ ಸಾಮರ್ಥ್ಯವನ್ನು ಬಸವಣ್ಣನವರು ನೀಡಿದ್ದಾರೆ. ಆ ಶಕ್ತಿಯನ್ನು ಬಳಸಿ ಹುಟ್ಟಿದ ಮನೆಗೆ ಮತ್ತು ಕೊಟ್ಟ ಮನೆಗೆ ಕೀರ್ತಿ ತರುವ ಕೆಲಸವನ್ನು ಮಹಿಳೆಯರು ಮಾಡಬೇಕು ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆಯ ಹದಿನಾಲ್ಕನೆೆಯ ದಿನವಾದ ಸೋಮವಾರ ಸಂಜೆ ನಡೆದ ವಚನ ಜಾತ್ರಾ ಮಹೋತ್ಸವದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮಹಿಳೆಯನ್ನು ಭೂತಾಯಿ, ಗೋಮಾತೆ, ನದಿ ಇತ್ಯಾದಿಗಳಿಗೆ ಹೋಲಿಸಲಾಗುತ್ತದೆ. ಬಹುತೇಕ ಎಲ್ಲ ಹಬ್ಬಗಳು ಹೆಣ್ಣು ಮಕ್ಕಳಿಗಾಗಿ ಇವೆ. ಅದು ಈ ನಾಡಿನ ಸಂಸ್ಕೃತಿ ಮತ್ತು ಸಂಸ್ಕಾರ. ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆ ಮಹಿಳೆಯರ ಮೇಲಿದೆ ಎಂದರು.

ಓಲೇಮಠದ ಆನಂದ ದೇವರು ಮಾತನಾಡಿ, ದ್ವೇಷ ಬಿಡು, ಪ್ರೀತಿ ಮಾಡು ಎಂಬ ತತ್ವ ಅಳವಡಿಸಿಕೊಳ್ಳಬೇಕು. ಒಂದು ಒಳ್ಳೆಯ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ತಲೆಯಲ್ಲಿನ ನೂರು ಕೆಟ್ಟ ವಿಚಾರಗಳು ದೂರವಾಗುತ್ತವೆ ಎಂದು ಆಶೀರ್ವಚನ ನೀಡಿದರು.

ಝುಂಜರವಾಡದ ಬಸವರಾಜೇಂದ್ರ ಶರಣರು ಮಾತನಾಡಿ, ಶರಣರು ತಮಗಾಗಿ ಬದುಕಲಿಲ್ಲ. ಬದಲಾಗಿ ನಮಗಾಗಿ ಬದುಕಿದರು. ಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ನಡೆದದ್ದು ರಕ್ತ ಕ್ರಾಂತಿಯಲ್ಲ. ಅದು ಭಕ್ತಿಕ್ರಾಂತಿ. ವಚನ ಸಾಹಿತ್ಯವನ್ನು ಉಳಿಸಿಕೊಳ್ಳಲು ಶರಣರು ರಾತ್ರೋರಾತ್ರಿ ಕಲ್ಯಾಣವನ್ನು ತೊರೆದಿದ್ದರು ಎಂದರು.

ಅಥಣಿಯ ಬಸವರಾಜ ಉಮರಾಣಿ ಮಾತನಾಡಿ, ಮಕ್ಕಳ ಕೈಗೆ ಮೊಬೈಲ್ ನೀಡುವುದರ ಬದಲಾಗಿ, ಪುಸ್ತಕ ನೀಡಿ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮಾತನಾಡಿದರು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಶ್ರೀಗಳು, ಮುತ್ತೂರಿನ ರಾಚೋಟೇಶ್ವರ ಮಠದ ಗುರುಸಿದ್ಧೇಶ್ವರ ಮಹಾಸ್ವಾಮಿಗಳು, ಕಡಪಟ್ಟಿಯ ಜಗದೀಶ್ವರ ಮಠದ ಅಭಿನವ ರಾಚೋಟೇಶ್ವರ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಿವಯ್ಯ ನಾಗರಾಳಮಠ, ಪ್ರದೀಪ ಮಹಾಲಿಂಗಪುರಮಠ, ಮೋನಿಕಾ ಹಿರೇಮಠ, ರಾಜು ವಾರದ, ಶ್ರೀಶೈಲ ತೇಲಿ, ಸದಾಶಿವ ಸೊನ್ನದ, ಚನ್ನಪ್ಪ ಬಿರಾದಾರ, ಶಂಕರ ಜಾಲಿಗಿಡದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net