

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ತ್ರೀ ಒಂದು ವ್ಯಕ್ತಿಯಾಗಿರದೆ ಕುಟುಂಬದ ಶಕ್ತಿಯಾಗಿ ಕುಟುಂಬ ಮುನ್ನಡೆಸುತ್ತ ಮಗುವಿಗೆ ಜನ್ಮ ನೀಡಿದ್ದಲ್ಲದೇ, ಲಾಲನೆ ಪಾಲನೆಯೊಂದಿಗೆ ಸಂಸ್ಕಾರವನ್ನು ಧಾರೆ ಎರೆದು ಸದೃಢ ಸಮಾಜ ನಿರ್ಮಾಣಕ್ಕೆ ಕಾರಣವಾಗಿದ್ದಾಳೆ ಎಂದು ಆಕಾಶವಾಣಿ ಉದ್ಘೋಷಕಿ ಜಿ. ಸುರೇಖಾ ಸುರೇಶ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಇತ್ತೀಚೆಗೆ ಆಯೋಜಿಸಿದ್ದ ಮಹಿಳೆ ಮತ್ತು ಕಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯ ಶಕ್ತಿ ಕುಟುಂಬ ನಿರ್ವಹಣೆಗೆ ಸೀಮಿತವಾಗದೆ ತನ್ನೊಳಗಿನ ಪ್ರತಿಭೆ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಲಿ. ನಿಜವಾದ ಜನಪದ ಕಲೆ ಮಹಿಳೆಯರಲ್ಲಿ ಅಡಗಿದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಲು ಕರ್ನಾಟಕ ವಿದ್ಯಾವರ್ಧಕ ಸಂಘದಂತೆ ಉಳಿದ ಸಂಘ- ಸಂಸ್ಥೆಗಳೂ ವೇದಿಕೆ ಕಲ್ಪಿಸಲಿ ಎಂದರು.
ಮಹಿಳೆಯರಿಗಾಗಿ ಏರ್ಪಡಿಸಿದ್ದ ಕಿರುನಾಟಕ ಸ್ಪರ್ಧೆ ನಿರ್ಣಾಯಕರಾಗಿ ಸೀತಾ ಛಪ್ಪರ, ಆರತಿ ದೇವಶಿಖಾಮಣಿ ಮತ್ತು ಡಾ. ಪ್ರಕಾಶ ಮಲ್ಲಿಗವಾಡ ಆಗಮಿಸಿದ್ದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿ. ಶಾರದಾ ನಿರೂಪಿಸಿದರು. ಜ್ಯೋತಿ ಭಾವಿಕಟ್ಟಿ ವಂದಿಸಿದರು.