

ಸುಬ್ರಹ್ಮಣ್ಯ: ನಾವು ಜೀವನದಲ್ಲಿ ನಮ್ಮ ಹಂತಕ್ಕೆ ಮಾತ್ರ ಆದಾಯ ಗಳಿಸುವ ಕಾರ್ಯಕ್ಕೆ ಸೀಮಿತವಾಗಿರದೆ ಇತರರಿಗೆ ಉದ್ಯೋಗ ನೀಡುವ ಹಂತಕ್ಕೆ ಮುನ್ನಡೆಯಬೇಕು. ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಕೌಶಲ ಪರಿಣಿತರಾಗಿದ್ದಾರೆ. ಚಿಕ್ಕಂದಿನಿಂದಲೇ ಹೆಣ್ಣು ಮನೆಯಲ್ಲೇ ಕೆಲಸ-ಕಾರ್ಯಗಳನ್ನು ನಡೆಸುತ್ತಾ ಪ್ರಕೃತಿದತ್ತವಾಗಿ ಎಲ್ಲ ಗುಣಗಳನ್ನು ಬೆಳೆಸಿಕೊಂಡಿರುತ್ತಾರೆ. ಸರ್ಕಾರ ಕೂಡ ಉದ್ಯಮಗಳಿಗೆ ನೆರವನ್ನು ನೀಡುತ್ತದೆ. ಮಹಿಳೆಯರು ಅವಕಾಶಗಳನ್ನು ಹೊಂಚು ಹಾಕಿ ಕಾಯುತ್ತಿರಬೇಕು ಮತ್ತು ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಉಜಿರೆ ರುಡ್ಸೆಟ್ನ ಹಿರಿಯ ಶ್ರೇಣಿ ಉಪನ್ಯಾಸಕಿ ಅನಸೂಯ ತಿಳಿಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ಎಸ್ಡಿಎಂ ಕಾಲೇಜು ಉಜಿರೆ ಸಹಭಾಗಿತ್ವದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರಿಸರ್ಚ್ ಸದನ ರೀಜನಲ್ ಸೆಂಟರ್ ಹೈದರಾಬಾದ್ ಪ್ರಾಯೋಜಕತ್ವದಲ್ಲಿ ಪ್ರಗತಿಯ ಹಾದಿಯಲ್ಲಿ ವಿಕಸಿತ ಭಾರತಕ್ಕಾಗಿ ಮಹಿಳಾ ಕೌಶಲ ವರ್ಧನೆ ಎಂಬ ವಿಷಯದಲ್ಲಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ. ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಎನ್ಐಟಿಕೆ ಸಹಾಯಕ ಪ್ರಾಧ್ಯಾಪಕ ಡಾ.ರಾಜೇಶ್ ಆಚಾರ್ಯ ಎಚ್, ಉಜಿರೆ ರುಡ್ಸೆಟ್ನ ಉಷಾ ಕಾಮತ್, ಉಜಿರೆ ಎಸ್ಡಿಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಗಣರಾಜ ಕೆ., ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗದ ಎಚ್ಒಡಿ ಲತಾ ಬಿ.ಟಿ. ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಲತಾ ಕಮಿಲ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶಶಿ ಕೆ. ವಂದಿಸಿದರು. ಉಪನ್ಯಾಸಕ ಆರತಿ ಹಾಗೂ ಸೃಜನ್ ಮುಂಡೋಡಿ ಕಾರ್ಯಕ್ರಮ ನಿರೂಪಿಸಿದರು.\