

ನಿಡಗುಂದಿ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರೂ ಸರಿಸಮಾನವಾಗಿ ಬದುಕಬೇಕೆಂದು ಬಸವಣ್ಣನವರು 12ನೇ ಶತಮಾನದಲ್ಲೇ ಚಿಂತನೆ ನಡೆಸಿ ಮಹಿಳೆಗೆ ಸಮಾನ ಅವಕಾಶ ನೀಡಿದ್ದರಿಂದಲೇ ಎಲ್ಲ ರಂಗದಲ್ಲಿಂದು ಮಹಿಳೆ ಬೆಳೆಯುತ್ತಿದ್ದಾಳೆ ಎಂದು ತಹಸೀಲ್ದಾರ್ ಎ.ಡಿ. ಅಮರವಾಡಗಿ ಹೇಳಿದರು.
ಪಟ್ಟಣದ ಕೆಜಿಎಸ್ ಶಾಲೆ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ, ಕೆಜಿಎಸ್ ಶಾಲೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ತಾಯಂದಿರ ಪಾದಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಟೋ ಚಾಲಕರಿಂದ ಹಿಡಿದು ಬಾಹ್ಯಾಕಾಶ, ತಂತ್ರಜ್ಞಾನ, ರಾಜಕೀಯ, ಸೇನೆ, ಖಗೋಳಶಾಸ, ವಿಜ್ಞಾನ ಸೇರಿ ಎಲ್ಲ ರಂಗದಲ್ಲೂ ಮಹಿಳೆ ಸರಿಸಮಾನವಾಗಿ ಗುರುತಿಸಿಕೊಂಡಿದ್ದಾರೆ. ನೌಕರರ ಸಂಘದ ಮಾದರಿ ಕಾರ್ಯಕ್ರಮ ಸ್ತುತ್ಯಾರ್ಹವಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಟಿ. ಗೌಡರ ಮಾತನಾಡಿ, ಮಹಿಳೆ ಸಾಹಸ ಕ್ಷೇತ್ರ ಆಯ್ಕೆ ಮಾಡಿಕೊಂಡು ಮುನ್ನಡೆದಾಗ ಅವಮಾನಿಸುವರು ಸಹಜ. ಅಂಥಹ ಸಂದರ್ಭ ಹಿಂಜರಿಯದೆ ಮುಂದೆ ಸಾಗಿದಾಗ ಸಾಧನೆ ಗರಿ ಮುಡಿ ಸೇರುತ್ತದೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರಯುತ ಶಿಕ್ಷಣ ಸಿಗುತ್ತಿಲ್ಲ. ಪೋಷಕರು ಮತ್ತು ಕುಟುಂಬಗಳನ್ನು ಕಡೆಗಣಿಸುವಂತ ವಾತಾವತಣ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಅಧ್ಯಾತ್ಮ ತಿಳಿಸಿಕೊಡಬೇಕಿದೆ ಎಂದರು.
ವಿವಿಧ ಇಲಾಖೆಯಲ್ಲಿ ಸೇವೆ ಜತೆಗೆ ಸೇವೆಯಲ್ಲಿ ಸಾಧನೆಗೈದ ಆರು ಮಹಿಳೆಯರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಲಾಯಿತು.
ಶಿಕ್ಷಣ ಸಂಯೋಜಕ ಉದಯಕುಮಾರ ಬಶೆಟ್ಟಿ, ಆರ್.ಎ. ನದಾಫ್, ಎಚ್.ಎಚ್. ದೊಡಮನಿ, ಡಾ. ಮಲ್ಲಮ್ಮ ರೆಡ್ಡಿ, ಸಾಹೇಬಗೌಡ ಬಿರಾದಾರ, ಬಿ.ಸಿ. ನದಾಫ್, ಬಿ.ಎಸ್. ಇಜೇರಿ, ಸಂಗಮೇಶ ಮಡಿಕೇಶ್ವರ, ಎಸ್.ಬಿ. ಬಜಂತ್ರಿ, ಪಿ.ಎಸ್. ರಾಠೋಡ, ಎಸ್‌ಡಿಎಂಸಿ ಅಧ್ಯಕ್ಷ ರೇವಣಸಿದ್ದಯ್ಯ ಹಿರೇಮಠ ಇತರರಿದ್ದರು.
ಮನವಿ ಸಲ್ಲಿಕೆ: ನಿಡಗುಂದಿ ತಾಲೂಕಿನಲ್ಲಿ 1200 ಜನ ನೌಕರರಿದ್ದು, ನೌಕರರ ಸಮಸ್ಯೆ, ಕುಂದುಕೊರತೆ, ಸಭೆ ಸಮಾರಂಭ ಮಾಡಲು ಸೂಕ್ತ ಕಚೇರಿ ಅಗತ್ಯವಾಗಿದೆ. ಕಚೇರಿ ನಿರ್ಮಾಣಕ್ಕೆ ಜಾಗ ಒದಗಿಸುವಂತೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಟಿ ಗೌಡರ ನೇತೃತ್ವದಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ನೌಕರರ ಸಂಘ ತಾಲೂಕು ಘಟಕ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿದ್ದು, ಖುಷಿ ಜತೆಗೆ ಜನರ ಸೇವೆ ಕಾರ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆಯಾಗಿದೆ. ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ.
// ಎನ್.ಬಿ. ಮುಳೂರು ಪ್ರಶಸ್ತಿ ಪುರಸ್ಕೃತೆ