

ಸಂತೋಷ ವೈದ್ಯ ಹುಬ್ಬಳ್ಳಿ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ದಟ್ಟಣೆಯು ಪುರುಷರ ಸಂಖ್ಯೆಯನ್ನು ಮೀರಿಸಿದೆ. ಮಹಿಳೆಯರ ಉಪಸ್ಥಿತಿಯು ಶೇ. 62ಕ್ಕೆ ಮುಟ್ಟಿದ್ದು, ಪುರುಷರ ಪ್ರಮಾಣ ಶೇ. 38ಕ್ಕೆ ಕುಸಿದಿದೆ.
ವಾಕರಸಾ ಸಂಸ್ಥೆಯ ಅಧಿಕೃತ ದಾಖಲೆಯ ಪ್ರಕಾರ ಶಕ್ತಿ ಯೋಜನೆ ಜಾರಿಗೊಂಡ ದಿನದಿಂದ 2025ರ ಫೆಬ್ರವರಿ 26ರವರೆಗೆ 93.39 ಕೋಟಿ ಶೂನ್ಯ ವಿಕೆಟ್ ವಿತರಿಸಲಾಗಿದೆ. ಇದು ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಮಹಿಳೆಯರ ಉಪಸ್ಥಿತಿಯು ಶೇ. 61.54 ರಷ್ಟಿದೆ ಎಂಬುದನ್ನು ಬಿಂಬಿಸುತ್ತದೆ.
ಇದೇ ಅವಧಿಯಲ್ಲಿ ಪುರುಷರು ನಗದು ಪಾವತಿಸಿ 58.37 ಕೋಟಿ ಸಂಖ್ಯೆಯಷ್ಟು ಟಿಕೆಟ್ (ಶೇ. 38.46) ಪಡೆದಿದ್ದಾರೆ. ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ಶಕ್ತಿ ಯೋಜನೆಯನ್ನು 2023ರ ಜೂನ್ 11ರಂದು ಕರ್ನಾಟಕ ಸರ್ಕಾರ ಜಾರಿಗೆ ತಂದಿತ್ತು. ಮಹಿಳೆಯರ ಉಚಿತ ಪ್ರಯಾಣ ವೆಚ್ಚವನ್ನು ರಾಜ್ಯ ಸರ್ಕಾರ, ಸಾರಿಗೆ ಸಂಸ್ಥೆಗಳಿಗೆ ನಿಯಮಿತವಾಗಿ ಪಾವತಿಸುತ್ತದೆ.
ಮಹಿಳೆಯರ ಉಚಿತ ಪ್ರಯಾಣಕ್ಕೆ ವಿತರಿಸಲಾದ 93.39 ಕೋಟಿ ಶೂನ್ಯ ಟಿಕೆಟ್ನ ಮೌಲ್ಯ 2429.34 ಕೋಟಿ ರೂ. ಆಗಿದೆ. ಇದೇ ವೇಳೆ ಪುರುಷರು 1973.60 ಕೋಟಿ ರೂ. ಪಾವತಿಸಿ ಪ್ರಯಾಣಿಸಿದ್ದಾರೆ. ಹೀಗೆ ಆದಾಯದಲ್ಲೂ ಮಹಿಳೆಯರ ಪಾಲು (ಶೇ. 55.17), ಪುರುಷರಿಗಿಂತ (ಶೇ. 44.83) ಹೆಚ್ಚಿರುವುದು ಸಹ ಗಮನಾರ್ಹ ಸಂಗತಿ.
ಶಕ್ತಿ ಯೋಜನೆಯ ಜಾರಿಗೆ ಪೂರ್ವ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಪುರುಷ ಪ್ರಯಾಣಿಕರದ್ದೇ ಪಾರಮ್ಯ ಇತ್ತು. ನಿಖರವಾಗಿ ಲೆಕ್ಕ ಇಟ್ಟಿರದಿದ್ದರೂ ಸರಾಸರಿ ಶೇ. 70ರಿಂದ 75ರಷ್ಟು ಪುರುಷರು ಹಾಗೂ ಶೇ. 25ರಿಂದ 30 ರಷ್ಟು ಮಹಿಳೆಯರ ಉಪಸ್ಥಿತಿ ಇರುತ್ತಿತ್ತು ಎಂದು ಅಂದಾಜಿಸಲಾಗಿತ್ತು. ಇದೀಗ ಶಕ್ತಿ ಯೋಜನೆಯ ಜಾರಿಯ ಬಳಿಕ ನಿಖರ ಲೆಕ್ಕ ಸಿಕ್ಕಿದ್ದು, ಪುರುಷ ಮತ್ತು ಮಹಿಳಾ ಪ್ರಯಾಣಿಕರ ಪ್ರಮಾಣ ಅದಲು ಬದಲಾಗಿದೆ.
ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳ ಮಹಿಳೆಯರಿಗೆ ಶಕ್ತಿ ಯೋಜನೆ ವರದಾನವಾಗಿದೆ. ಮಹಿಳೆಯರು ಹೆಚ್ಚಾಗಿ ಪ್ರವಾಸಿ ಮತ್ತು ಧಾರ್ವಿುಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಬದಾಮಿ ಬನಶಂಕರಿ, ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡಿನ ನಂಜುಡೇಶ್ವರ, ಹೊರನಾಡ ಅನ್ನಪೂರ್ಣೆಶ್ವರಿ, ಸವದತ್ತಿ ಯಲ್ಲಮ್ಮ, ಶ್ರೀರಂಗಪಟ್ಟಣದ ನಿಮಿಷಾಂಬ ಹಾಗೂ ಮೈಲಾರ ದೇವಸ್ಥಾನಗಳಿಗೆ ಭೇಟಿ ನೀಡುವ ಮಹಿಳೆಯರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಈ ದೇವಸ್ಥಾನಗಳ ಆದಾಯವು ಹೆಚ್ಚಳವಾಗಿರುವುದು ವರದಿಯಾಗಿವೆ.
ವಾಕರಸಾ ಸಂಸ್ಥೆಯು ಧಾರವಾಡ, ಬೆಳಗಾವಿ, ಬಾಗಲಕೋಟ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಸಂಸ್ಥೆಯ ಬಸ್ಗಳಲ್ಲಿ ನಿತ್ಯ ಸರಾಸರಿ 15.05 ಲಕ್ಷ ಮಹಿಳೆಯರು ಹಾಗೂ 9.41 ಲಕ್ಷ ಪುರುಷರು ಪ್ರಯಾಣಿಸುತ್ತಿದ್ದಾರೆ. ಈ ಪ್ರಕಾರ ನಿತ್ಯ ಸರಾಸರಿ ಶೂನ್ಯ ಟಿಕೆಟ್ ಮೌಲ್ಯ 3.91 ಕೋಟಿ ರೂ. ಆಗಿದೆ. ಪುರುಷರು 3.18 ಕೋಟಿ ರೂ. ಪ್ರಯಾಣ ವೆಚ್ಚ ಪಾವತಿಸುತ್ತಿದ್ದಾರೆ.
ಜೂನ್ 11, 2023ರಿಂದ ಮಾರ್ಚ್ 31, 2024ರವರೆಗೆ ಶೂನ್ಯ ಟಿಕೆಟ್ ಸಂಖ್ಯೆ (ಮಹಿಳೆಯರು)--42,17,78,992 ನಗದು ಟಿಕೆಟ್ ಸಂಖ್ಯೆ (ಪುರುಷರು)--28,40,51,563 ಏಪ್ರಿಲ್ 1, 2024ರಿಂದ ಫೆಬ್ರವರಿ 26, 2025ರವರೆಗೆ ಶೂನ್ಯ ಟಿಕೆಟ್ ಸಂಖ್ಯೆ (ಮಹಿಳೆಯರು)--51,22,02,013 ನಗದು ಟಿಕೆಟ್ ಸಂಖ್ಯೆ (ಪುರುಷರು)--29,96,54,760