

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳೆಯರು ಮದರ್ ತೆರೇಸಾ, ಸಾವಿತ್ರಿಬಾಯಿ ಫುಲೆ ಅವರಂಥ ಮಹನೀಯರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಸೇವಾ ಮನೋಭಾವನೆ ಬೆಳೆಸಿಕೊಂಡು ಸಮಾಜಮುಖಿಗಳಾಗಬೇಕು ಎಂದು ಧಾರವಾಡ ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ಶೈಲಾ ಕರಗುದರಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು `ಮಹಿಳೆ ಮತ್ತು ಸಮಾಜ ಸೇವೆ' ವಿಷಯ ಕುರಿತು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ರ‍್ಯಾಪಿಡ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾಳವಿಕಾ ಕಡಕೋಳ ಮಾತನಾಡಿ, ಸಮಾಜ ಸೇವೆಯಲ್ಲಿ ಎನ್‌ಜಿಒಗಳ ಪಾತ್ರ ದೊಡ್ಡದು. ಮಹಿಳೆಯರಲ್ಲಿ ತಾಳ್ಮೆ ಮತ್ತು ಕಾರ್ಯತತ್ಪರತೆಯ ಗುಣಗಳು ಪುರುಷರಿಗಿಂತ ಹೆಚ್ಚಿರುವುದರಿಂದ ಅವರು ಸಮಾಜಸೇವೆ ಚಟುವಟಿಕೆಗಳನ್ನು ಹೆಚ್ಚು ನಿಸ್ವಾರ್ಥದಿಂದ ನಿಭಾಯಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಪ್ರತಿಯೊಬ್ಬ ಮಹಿಳೆ ಕೈಲಾದಷ್ಟು ಅವಶ್ಯಕತೆ ಇರುವ ಮಹಿಳೆಯರಿಗೆ ಸಹಾಯಹಸ್ತ ಚಾಚಬೇಕು ಎಂದರು.
ಮಹಿಳಾ ಮಂಡಳ ಸದಸ್ಯರು ವಚನ ಗಾಯನ ಪ್ರಸ್ತುತಪಡಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮಂಟಪದ ಸಂಚಾಲಕಿ ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಡಾ. ಅರುಣಾ ಹಳ್ಳಿಕೇರಿ ವಂದಿಸಿದರು.
ರೇಖಾ ಅಂತಕ್ಕನವರ, ಡಾ. ವಿ. ಶಾರದಾ, ಬಸವಂತಪ್ಪ ತೋಟದ, ಮಹಾಂತೇಶ ನರೇಗಲ್, ಸವಿತಾ ಕುಸುಗಲ್, ಉಸ್ಮಾ ದೇಸಾಯಿ ಉಷಾ ಗದ್ಗಿಮಠ, ಸುಧಾ ಹುಲಗೂರ, ಮಧುಮತಿ ಸಣಕಲ್, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಇತರರಿದ್ದರು.