ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಜಿಲ್ಲಾ ಸಮಿತಿಗಳ ಸಭೆ

18GDG05
Published on

ಗದಗ: ಜಿಲ್ಲೆಯಲ್ಲಿ  ಮಕ್ಕಳ  ಗ್ರಾಮಸಭೆಗಳನ್ನು  ನಿಯಮಿತವಾಗಿ ಕಡ್ಡಾಯವಾಗಿ ಜರುಗಿಸಬೇಕು.  ಗ್ರಾಮ ಸಭೆಗಳಲ್ಲಿ ಬಾಲ್ಯ ವಿವಾಹ ನಿಷೇಧ ಹಾಗೂ ಫೋಕ್ಸೋ ಕಾಯ್ದೆಯ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಮಹಿಳಾ ಇಲಾಖೆಯ ವಿವಿಧ ಸಮಿತಿ ಸಭೆಗಳಲ್ಲಿ ಪಾಲ್ಗೊಂಡು ಮಾತನಾಡಿದರು. ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗಳಲ್ಲಿಯೂ ಸಹ ಬಾಲ್ಯ ವಿವಾಹ ನಿಷೇಧ ಹಾಗೂ ಫೋಕ್ಸೋ ಕಾಯ್ದೆಯ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗುವ ದಿಸೆಯಲ್ಲಿ ಲಿಂಗಾನುಪಾತ ಕಡಿಮೆ ಇರುವ ತಾಲೂಕು ಹಾಗೂ ಗ್ರಾಮ ಪಂಚಾಯತ್‍ಗಳಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ವಿಳಂಬ ಮಾಡದೇ ಅವರ ಆರೋಗ್ಯ ಸುಧಾರಣೆಗಾಗಿ ಎನ್.ಆರ್.ಸಿ.( ಪೌಷ್ಟಿಕಾಂಶ ಪುನರ್ವಸತಿ ಕೇಂದ್ರ)  ಕೇಂದ್ರಗಳಿಗೆ ದಾಖಲಿಸಲು ಕ್ರಮ ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಇಲಾಖೆಯಿಂದ ಅನುಷ್ಟಾನಗೊಂಡಿರುವ  ವಿವಿಧ ಯೋಜನೆಗಳ  ಸೌಲಭ್ಯ ಅರ್ಹ ಫಲಾನುಭವಿಗಳಿಗೆ ದೊರಕುವಂತಾಗಬೇಕು.ಮಹಿಳಾ ಮತ್ತು ಮಕ್ಕಳ ದೌರ್ಜನ್ಯ,   ಮಹಿಳೆಯರ ಮತ್ತು ಮಕ್ಕಳ ಸಾಗಾಟ, ಕೌಟುಂಬಿಕ ದೌರ್ಜನ್ಯ, ಬಾಲ್ಯವಿವಾಹ ಸೇರಿದಂತೆ ವಿವಿಧ ಪ್ರಕರಣಗಳ  ಶೀಘ್ರ ಇತ್ಯರ್ಥಕ್ಕೆ  ಕ್ರಮ ವಹಿಸಬೇಕು ಎಂದು ಕೆ. ಗುರುಪ್ರಸಾದ ಅಧಿಕಾರಿಗಳಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನ್ನಪೂರ್ಣ ಎಂ. ಅವರು ಮಾತನಾಡಿ ಮಹಿಳಾ ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಿಸಲು  ಅಧಿಕಾರಿಗಳು ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕೆಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಅವರು ಮಾತನಾಡಿ  ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟು 11 ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯ ತಡೆ ಕಾಯ್ದೆಯಡಿ ತಾಲೂಕಾ ಮಟ್ಟದಲ್ಲಿ 5  ಸಭೆಗಳನ್ನು  ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ 122 ಸಭೆಗಳನ್ನು ಆಯೋಜಿಸಿ ಅರಿವು ಮೂಡಿಸಲಾಗಿದೆ. 2023-24 ನೇ ಸಾಲಿನ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಡಿಸೆಂಬರ್ 2023 ರವರೆಗೆ ಒಟ್ಟು 89 ಪ್ರಕರಣಗಳು ದಾಖಲಾಗಿದ್ದು ಆ ಪೈಕಿ 25 ಪ್ರಕರಣಗಳನ್ನು ಇತ್ಯರ್ಥಗೊಂಡಿವೆ. 64 ಪ್ರಕರಣಗಳು ಬಾಕಿ ಇದ್ದು ಆ ಪೈಕಿ 32 ಪ್ರಕರಣಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿನ 89 ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗಿದ್ದು  ಅದರಲ್ಲಿ ಈಗ 24 ಮಕ್ಕಳಲ್ಲಿ ಸುಧಾರಣೆ ಕಂಡು ಬಂದಿದೆ. 30 ಮಕ್ಕಳನ್ನು ಎನ್.ಆರ್.ಸಿ (ಪೌಷ್ಟಿಕಾಂಶ ಪುನರ್ವಸತಿ ಕೇಂದ್ರ) ಗೆ ದಾಖಲಿಸಲಾಗಿದೆ. ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಪೌಷ್ಟಿಕಾಂಶ ಹೆಚ್ಚಿಸಿ ಆರೋಗ್ಯ ಸುಧಾರಿಸಲು ನಿಯಮಿತವಾಗಿ ಮೊಟ್ಟೆಯನ್ನು ವಿತರಣೆ ಮಾಡಲಾಗುತ್ತಿದೆ. ಬೇಟಿ ಬಚಾವೋ, ಬೇಟಿಪಡಾವೋ ಹಾಗೂ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಕುರಿತು ಅರಿವು ಮೂಡಿಸಲಾಗುತ್ತಿದ್ದು ಅಡಿ ಕಡಿಮೆ ಲಿಂಗಾನುಪಾತ ಇರುವ ತಾಲೂಕು / ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.  

ಸಭೆಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್, ಸ್ವೀಕಾರ ಕೇಂದ್ರ, ಬಾಲಕಿಯರ ವಸತಿ ನಿಲಯ, ಸ್ವಾಧಾರ ಗೃಹ, ಉಜ್ವಲ,  ವಿಧವಾ ಕೋಶ, ಐ.ಸಿ.ಡಿ.ಎಸ್. ಸಮನ್ವಯ , ದಮನಿತ ಮಹಿಳೆಯರ/ ಟ್ರಾನ್ಸ್ ಜೆಂಟರ್ಸ, ಸಾಂತ್ವನ , ಶಿಶುಪಾಲನಾ ಕೇಂದ್ರ, ಸ್ತ್ರೀ ಶಕ್ತಿ ಸಮನ್ವಯ, ಜಿಲ್ಲಾ ಬಾಲಭವನ ಸಮಿತಿ ವಿವಿಧ ಯೋಜನೆಗಳ  ಪ್ರಗತಿ ಪರಿಶೀಲನೆ ಜರುಗಿತು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಎಂ.ಬಿ.ಸಂಕದ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಧಾ ಮಣ್ಣೂರ, ಎಲ್ಲ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿ ಬಸವಂತಪ್ಪ, ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net