ಪ್ರತಿ ತಾಲೂಕಿಗೊಂದು ಶಿಶುಪಾಲನಾ ಕೇಂದ್ರ: ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಹೇಳಿಕೆ

Women and Child Development Department Progress Review Meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ 4 ಶಿಶುಪಾಲನಾ ಕೇಂದ್ರಗಳಿವೆ. ಆದರೆ ಪ್ರತಿ ತಾಲೂಕಿಗೆ ಒಂದರಂತೆ ಶಿಶುಪಾಲನ ಕೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.

ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಶುಪಾಲನಾ ಕೇಂದ್ರದಲ್ಲಿ 6 ತಿಂಗಳಿಂದ 6 ವರ್ಷದ ಒಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಸುರಕ್ಷತೆ ಒದಗಿಸುವುದು. ಇದಲ್ಲದೆ ಮಕ್ಕಳ ಪೋಷಣೆ ಹಾಗೂ ಆರೋಗ್ಯದ ಸ್ಥಿತಿಯನ್ನು ವಿಚಾರಿಸುವ ಕೆಲಸವಾಗಬೇಕು. ಮಕ್ಕಳ ದೈಹಿಕ ಅರಿವಿನ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಯನ್ನು ಉತ್ತೇಜಸುವುದು ಕೇಂದ್ರದ ಉದ್ದೇಶವಾಗಿದೆ ಎಂದರು.

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಶುಪಾಲನ ಕೇಂದ್ರದಲ್ಲಿ ಮಕ್ಕಳಿಗಾಗಿ ಕೈಗೊಳ್ಳಬೇಕಾಗಿರುವ ಚಟುವಟಿಕೆಗಳ ಬಗ್ಗೆ ಪಟ್ಟಿ ತಯಾರಿಸಿ, ಅದರಂತೆ ಚಟುವಟಿಕೆಗಳು ನಡೆಯಬೇಕು. ಜತೆಗೆ ಶಿಶುಪಾಲನಾ ಕೇಂದ್ರಗಳಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಬೇಕು. ಶಿಶುಪಾಲನ ಕೇಂದ್ರಗಳಿಗೆ ಆಯಾ ಸಿಡಿಪಿಒ ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕೇಂದ್ರಕ್ಕೆ ಸ್ವಯಂ ಸೇವಾ ಸಂಸ್ಥೆಯವರು ಶಿಕ್ಷಕಿಯರನ್ನು ನೇಮಕಾತಿ ಮಾಡುವಾಗ ಶಾಲಾ ಪೂರ್ವ ಶಿಕ್ಷಣ ತರಬೇತಿ ಪಡೆದಿರುವವರಿಗೆ ಆದ್ಯತೆ ನೀಡಬೇಕು. ಶಾಲಾ ಪೂರ್ವ ಶಿಕ್ಷಣ ತರಬೇತಿ ಪಡೆಯದೆ ಆಯ್ಕೆಗೊಂಡ ಶಿಕ್ಷಕಿಯರಿಗೆ ಶಾಲಾ ಪೂರ್ವ ಶಿಕ್ಷಣ ತರಬೇತಿ ನೀಡಬೇಕು ಎಂದು ಸೂಚನೆ ನೀಡಿದರು.

ಇನ್ನು ಸಾಂತ್ವನ ಯೋಜನೆ ಕೌಟುಂಬಿಕ ದೌರ್ಜನ್ಯಕ್ಕೊಳಗಾದ, ಸಮಾಜದ ನಿಂದನೆಗೊಳಗಾದ ಹಾಗೂ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಒಳಪಟ್ಟ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸುವುದಾಗಿದೆ. ಜತೆಗೆ ಕಾನೂನಿನ ನೆರವು ಹಾಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಂತ್ವನ ಯೋಜನೆ ನೆರವು ನೀಡುವ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಒಟ್ಟು 6 ಸಾಂತ್ವನ ಕೇಂದ್ರಗಳಿವೆ. ಪಾಂಡವಪುರದ ಜ್ಞಾನಮಾತಾ ಎಜುಕೇಷನ್ ಟ್ರಸ್ಟ್, ಕೆ.ಆರ್.ಪೇಟೆಯ ರಿವರ್‌ವ್ಯಾಲಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಶ್ರೀರಂಗಪಟ್ಟಣದ ಅನುಪಮಾ ಅಸೋಸಿಯೇಷನ್, ಮದ್ದೂರಿನ ಅಕ್ಷಯನಿಕೇತನಾ ಟ್ರಸ್ಟ್, ಮಳವಳ್ಳಿಯ ವಿಕಾಸ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಾಗೂ ನಾಗಮಂಗಲದ ನಿಸರ್ಗ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಸಾಂತ್ವನ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿವೆ. ಮುಖ್ಯವಾಗಿ ಸಾಂತ್ವನ ಕೇಂದ್ರದಲ್ಲಿ ದಾಖಲಾಗುವ ಪ್ರಕರಣಗಳು ಇತ್ಯರ್ಥವಾಗುವ ಮುನ್ನ ಪರಿಶೀಲನೆ ನಡೆಸಬೇಕು. ಒಂದೊಮ್ಮೆ ಗಂಭೀರ ಪ್ರಕರಣವಾಗಿದ್ದರೆ ಎಫ್‌ಐಆರ್ ಮಾಡಿಸಬೇಕು ಎಂದು ತಿಳಿಸಿದರು.

ಸಾಂತ್ವನ ಕೇಂದ್ರಗಳನ್ನು ನಡೆಸುವ ಅರ್ಹ ಸಂಸ್ಥೆಯು ಮೂಲ ಸೌಲಭ್ಯಗಳನ್ನು ಹೊಂದಿರಬೇಕು. ಸಂಸ್ಥೆಯು ನೋಂದಣಿಯಾಗಿ ಕನಿಷ್ಟ 3 ವರ್ಷಗಳಾಗಿದ್ದು, ಮಹಿಳಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರಬೇಕು. ಸಂಸ್ಥೆಯು ಪ್ರತಿ ವರ್ಷ ನವೀಕರಣ ಗೊಂಡಿರಬೇಕು. ಲೆಕ್ಕಪತ್ರ ದಾಖಲೆ ಹಾಗೂ ವಾರ್ಷಿಕ ಪ್ರಗತಿ ವರದಿಗಳನ್ನು ಕ್ರಮಬದ್ದವಾದ ಸೌಲಭ್ಯ ಹೊಂದಿರುವುದರ ಜತೆಗೆ ಆರ್ಥಿಕವಾಗಿ ಸದೃಢವಾಗಿರಬೇಕು. ಸ್ವಯಂ ಸೇವಾ ಸಂಸ್ಥೆಯು ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವಲ್ಲಿ ಅನುಭವ ಹೊಂದಿರಬೇಕು. ಮಹಿಳೆಯರಿಗೆ ರಕ್ಷಣೆ ನೀಡಲು ಸ್ವಯಂ ಸೇವಾ ಸಂಸ್ಥೆಯು ಸ್ವಂತ ಸ್ಥಳ ಹೊಂದಿಲ್ಲದಿದ್ದಲ್ಲಿ ಬಾಡಿಗೆ ಕಟ್ಟಡದ ವ್ಯವಸ್ಥೆ ಮಾಡುವಂತಿರಬೇಕು. ಸ್ವಯಂ ಸೇವಾ ಸಂಸ್ಥೆಯ ವಿವಿಧ ಇಲಾಖೆ /ಇತರೆ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ ಅರ್ಹತೆಗಳನ್ನೊಳಗೊಂಡ ಸಂಸ್ಥೆಯಿಂದ ಪ್ರಸ್ತಾವನೆಯನ್ನು ಪಡೆದು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಹಿಳಾ ಅಭಿವೃದ್ಧಿ ಅಧಿಕಾರಿ, ಜಿಲ್ಲಾ ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಪರಿಶೀಲಿಸಿದ ನಂತರ ಅವರ ಪರಿಶೀಲನಾ ವರದಿಯನ್ನು ನಮೂದಿಸಿರುವ ತಡೆಪಟ್ಟಿಯಲ್ಲಿ ತನಿಖಾಧಿಕಾರಿಗಳು ಸ್ಪಷ್ಟ ಅಭಿಪ್ರಾಯದೊಂದಿಗೆ ನೀಡಬೇಕು ಎಂದು ಹೇಳಿದರು.

ಇನ್ನು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಜಿಲ್ಲೆಯಲ್ಲಿ 2024ನೇ ಸಾಲಿನಲ್ಲಿ ಜನವರಿ ಮಾಹೆಯಿಂದ ಆಗಸ್ಟ್‌ವರೆಗೆ ಒಟ್ಟು 47 ಪ್ರಕರಣ ದಾಖಲಾಗಿದ್ದು, ಈ ಪೈಕಿ 27 ಪ್ರಕರಣವು ಇತ್ಯರ್ಥಗೊಂಡಿದೆ. ಬಾಕಿ 20 ಪ್ರಕರಣಗಳ ಬಗ್ಗೆ ಗಮನಹರಿಸಬೇಕು. ಜಿಲ್ಲೆಯಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರಿಗೆ ಅರಿವು ಮೂಡಿಸಬೇಕು. ವರದಕ್ಷಿಣೆ ಕಾಯ್ದೆ ಕುರಿತು ಗ್ರಾಮ ಸಭೆಗಳಲ್ಲಿ ಮತ್ತು ಕಾರ್ಯಕರ್ತೆಯರ ವೃತ್ತ ಸಭೆಗಳಲ್ಲಿ ತಿಳುವಳಿಕೆ ನೀಡಬೇಕು ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ವತಿಯಿಂದ ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ಆನಂದ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ರಾಜಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಶಿವರಾಮೇಗೌಡ, ವಿವಿಧ ತಾಲೂಕು ಸಿಡಿಪಿಒಗಳಾದ ಯೋಗೇಶ್, ಕೃಷ್ಣಮೂರ್ತಿ, ಎಚ್.ಕೆ.ಕುಮಾರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net