ಅಪೌಷ್ಟಿಕತೆಯಿಂದ ಬಳಲುತ್ತಿದೆ ಮಹಿಳಾ,‌ ಮಕ್ಕಳ ಅಭಿವೃದ್ಧಿ ಇಲಾಖೆ ಕಟ್ಟಡ!

09-Jaggu-2.jpg
Published on

ಬೆಳಗಾವಿ: ಇತರ ಎಲ್ಲ ಇಲಾಖೆಗಳಿಗಿಂತ ಜವಾಬ್ದಾರಿ, ಕಾರ್ಯಭಾರ ಹೆಚ್ಚಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಟ್ಟಡ ಹಾಳು ಕೊಂಪೆಯಂತೆ ಗೋಚರವಾಗುತ್ತಿದೆ.
ಇಂತಹದೊಂದು ಮಹತ್ವದ ಇಲಾಖೆಯ ಕಚೇರಿಗಳು ಸುಸಜ್ಜಿತ ಕಟ್ಟಡದಲ್ಲಿದ್ದು, ಸಾರ್ವಜನಿಕರಿಗೆ ಭೇಟಿಗೆ ಸುಲಭವಾಗಿ ಸಿಗುವಂತಿರಬೇಕು. ಆದರೆ, ಬೆಳಗಾವಿಯ ಶಿವಾಜಿ ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಈ ಅಂಶಗಳು ಅನ್ವಯಿಸುತ್ತಿಲ್ಲ. ಹೌದು. ಈ ಇಲಾಖೆಯ ಕಚೇರಿ ಬಗ್ಗೆ ಮೊದಲು ಹೇಳಬೇಕೆಂದರೆ ಸಾರ್ವಜನಿಕರಿಗೆ ಸುಲಭವಾಗಿ ಹುಡುಕಿದರೆ ಸಿಗುವುದಿಲ್ಲ. ಹತ್ತು ಕಡೆ ವಿಚಾರಿಸಿ, ಗಲ್ಲಿ ಗಲ್ಲಿ ಸುತ್ತಿಕೊಂಡು ಹೋದರೆ ಕಚೇರಿ ಸಿಗುತ್ತದೆ. ಕಚೇರಿ ಹುಡುಕಿಕೊಂಡು ಹೋದವರಿಗೆ ಕಚೇರಿ ನೋಡಿದ ತಕ್ಷಣ ಯಾವುದೋ ಹಾಳು ಕೊಂಪೆಗೆ ಹೋದಂತೆ ಬಾಸವಾಗುತ್ತದೆ. ಈಗಲೋ ಆಗಲೋ ಕಿಟಕಿಗಳು, ಬಾಗಿಲುಗಳು ಮುರಿದು ಬೀಳುವ ಹಂತದಲ್ಲಿರುವ ಕಟ್ಟಡದಲ್ಲೇ ಇಲಾಖೆಯ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.

ದಶಕಗಳಿಂದ ಹಳೇ ಕಟ್ಟಡದಲ್ಲಿ ಕಚೇರಿ!
ಪ್ರಸ್ತುತ ಇಲಾಖೆ ಇರುವ ಕಟ್ಟಡ ಸುಮಾರು 100 ವರ್ಷದ ಹಳೆಯದ್ದಾಗಿದೆ. ಮೊದಲು ಈ ಕಟ್ಟಡದಲ್ಲಿ ಕಿವುಡ ಮತ್ತು ಮೂಖ ಮಕ್ಕಳ ಶಾಲೆ ಇತ್ತು. ಈ ಶಾಲೆಯು ಅಜಂ ನಗರ ಸೇರಿ ಇತರೆ ಕಡೆಗಳಲ್ಲಿ ಸ್ಥಳಾಂತರವಾದ ಬಳಿಕ ಈ ಕಟ್ಟಡದಲ್ಲಿ 1980ರಿಂದಲೂ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಕೊನೆಪಕ್ಷ ಹಳೇ ಕಟ್ಟಡವನ್ನು ನವೀಕರಣ ಮಾಡಿ ಕಟ್ಟಡಕ್ಕೆ ಹೊಸ ಲುಕ್ ಬರುವಂತೆ ಅಧಿಕಾರಿಗಳು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಏಕೆಂದರೆ ಲೋಕೋಪಯೋಗಿ ಇಲಾಖೆ 2-3 ಬಾರಿ ಪರಿಶೀಲಿಸಿದೆ. ನವೀಕರಣ ಹಾಗೂ ಈ ಕಟ್ಟಡದ ಮೇಲೆ ಯಾವುದೇ ಕಟ್ಟಡ ಕಟ್ಟುವುದಕ್ಕೆ ಯೋಗ್ಯವಿಲ್ಲ ಎಂದು ವರದಿ ನೀಡಿದೆ.

ದೊಡ್ಡ ಇಲಾಖೆ, ಸೌಲಭ್ಯ ಕಡಿಮೆ!:
ಕಚೇರಿಯಲ್ಲಿ ಹರಕು-ಮುರುಕು ಕುರ್ಚಿ, ಪಿಠೋಪಕರಣಗಳೇ ಸಿಬ್ಬಂದಿಗೆ ಆಸರೆಯಾಗಿವೆ. ಗೋಡೆಗಳು ಧೂಳು ತಿನ್ನುತ್ತಿವೆ. ಕಿಟಕಿ, ಬಾಗಿಲುಗಳು ಮುರಿದಿವೆ. ಉಪನಿರ್ದೇಶಕರ ಕೊಠಡಿಯ ಗೋಡೆ ಬಿರುಕು ಬಿಟ್ಟಿದೆ. ಕಿಟಕಿಗಳಿಗೆ ಧೂಳು ಮೆತ್ತಿಕೊಂಡಿವೆ. ಇನ್ನು ಕಟ್ಟಡದಲ್ಲಿರುವ ಶೌಚಗೃಹಗಳನ್ನು ನೋಡಿದರೆ ಸಾರ್ವಜನಿಕರು ಬಳಸುವಂತೆ ಗೋಚರಿಸುತ್ತವೆ.

ಕಟ್ಟಡದಲ್ಲಿವೆ ಹಲವು ಕಚೇರಿಗಳು: ವಿಕಲಚೇತನರ ಮತ್ತು ಹಿರಿಯನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿಗಳ ಕಚೇರಿ, ಬಾಲ ನ್ಯಾಯಮಂಡಳಿ, ಸರ್ಕಾರಿ ವೀಕ್ಷಣಾಲಯ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ, ವಿಕಲಚೇತನರ ಮಾಹಿತಿ, ಸಲಹೆ ಹಾಗೂ ಸಹಾಯವಾಣಿ ಕೇಂದ್ರ, ಪುರುಷರ ಅನುಪಾಲನಾ ಗೃಹ ಕಚೇರಿಗಳು ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕಟ್ಟಡವು ಮಾತ್ರ ಬಳಸಲು ಯೋಗ್ಯವಾಗಿಲ್ಲ.

ಹೊಸ ಕಟ್ಟಡ ನಿರ್ಮಾಣ ಶೀಘ್ರ:
ಕಟ್ಟಡ ನಿರ್ಮಾಣಕ್ಕೆ 4 ಕೋಟಿ ರೂ. ಮಂಜೂರಾಗಿದೆ. ಈಗಾಗಲೇ 50 ಲಕ್ಷ ರೂ. ಬಿಡುಗಡೆಯಾಗಿದೆ. ಮುಂಬರುವ ದಿನಗಳಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಉಪನಿರ್ದೇಶಕ ಬಸವರಾಜ ಎ.ಎಂ. ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net