ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆಗಳ ಅರಿವು

women
Published on

ಮಡಿಕೇರಿ:

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ಸಂಬAಧಿಸಿದ ಯೋಜನೆಗಳ ಅರಿವು ಕಾರ್ಯಕ್ರಮವು ಕಡಗದಾಳು ಅಂಗನವಾಡಿ ಕೇಂದ್ರದಲ್ಲಿ ಈಚೆಗೆ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಈ ಸಂದರ್ಭ ಮಾತನಾಡಿ ಇಲಾಖೆಯ ಯೋಜನೆಗಳು, ಬಾಲ್ಯ ವಿವಾಹ, ಸ್ತನ್ಯಪಾನ ಸಪ್ತಾಹ, ಪೋಶನ್ ಟ್ರ‍್ಯಾಕರ್, ಪೋಶನ್ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.

ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯವರೊಂದಿಗೆ ಸೇರಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬAಧಪಟ್ಟ ಸಲಹೆ ಮಾರ್ಗದರ್ಶನ ನೀಡುವುದರೊಂದಿಗೆ ನೀಡಿದ ಸಲಹೆಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಬೇಕು ಎಂದರಲ್ಲದೆ ಭಾಗ್ಯಲಕ್ಷ್ಮಿ ಮತ್ತು ಮಾತೃವಂದನ ಫಲಾನುಭವಿಗಳನ್ನು ಭೇಟಿ ಮಾಡಿ ಹಣ ಪಾವತಿಯಾಗಿರುವ ಬಗ್ಗೆ ಮಾಹಿತಿ ಪಡೆದರು.

ಸಮುದಾಯ ಆರೋಗ್ಯ ಅಧಿಕಾರಿ ಕಲ್ಮೇಶ್ ಮಾತನಾಡಿ ಎದೆ ಹಾಲಿನ ಮಹತ್ವ, ಹೊಸ ಹೆಜ್ಜೆ ಕಾರ್ಯಕ್ರಮದಡಿ ವಿವಾಹಿತರು ತಾವು ಯಾವಾಗ ಪೋಷಕರಾಗಬೇಕು ಎಂಬುದನ್ನು ಅರಿತು ಮಾನಸಿಕವಾಗಿ ಸದೃಢರಾದಾಗ ಮಗುವನ್ನು ಪಡೆಯಲು ಮುಂದಾಗಬೇಕು, ಅಂತರದ ಹೆರಿಗೆಯ ಬಗ್ಗೆ ಕುಟುಂಬ ಕಲ್ಯಾಣ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಆರೋಗ್ಯ ಸಹಾಯಕಿ ಕುಸುಮಾ ಚುಚ್ಚುಮದ್ದಿನ ಬಗ್ಗೆ ಮಾಹಿತಿ ನೀಡಿದರು.

ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ ಪ್ರತಿ ತಿಂಗಳು ಮಕ್ಕಳಿಗೆ ತಪ್ಪದೇ ತೂಕ ಎತ್ತರವನ್ನು ಹಾಕಿಸಿ ಮಾಹಿತಿಯನ್ನು ಪೋಷಕರು ನಿರ್ವಹಿಸಿಕೊಳ್ಳುವುದರಿಂದ ಮಕ್ಕಳ ಬೆಳವಣಿಗೆ ಸರಿಯಾಗಿ ಆಗುತ್ತಿರುವ ಬಗ್ಗೆ ತಿಳಿದುಕೊಳ್ಳಬಹುದಾಗಿದ್ದು, ಪೋಷಕರು ಪ್ರತಿ ತಿಂಗಳು ಐದನೇ ತಾರೀಖಿನೊಳಗೆ ಅಂಗನವಾಡಿಯಲ್ಲಿ ತೂಕ ಹಾಕಿಸಬೇಕು. ಎಫ್‌ಆರ್‌ಎಸ್ ಬಳಕೆ ಮಾಡಬೇಕು. ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ ಹಣ್ಣುಗಳನ್ನು ಬಳಸಬೇಕು ಎಂದರಲ್ಲದೆ ನುಗ್ಗೆ ಸೊಪ್ಪಿನ ಮಹತ್ವದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಮಿಷನ್ ಸಂಯೋಜಕಿ ಮಮತಾ ಮಾತನಾಡಿ ಮಹಿಳೆಯರಿಗಾಗಿ ಜಿಲ್ಲಾ ಮಹಿಳಾ ಸಬಲೀಕಣ ಘಟಕವಿದ್ದು 181 ಮಹಿಳಾ ಸಹಾಯವಾಣಿ, 1098 ಮಕ್ಕಳ ಸಹಾಯವಾಣಿ, ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆಗಾಗಿ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯದ ಸೌಲಭ್ಯ, ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಇದ್ದು ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲೀಸ್ಟ್ ಎಸ್.ಆರ್. ಕೇಶಿನಿ, ಪೋಷಣ್ ಅಭಿಯಾನದ ಜಿಲ್ಲಾ ಸಂಯೋಜಕ ನಿತಿನ್, ಆಶಾ ಕಾರ್ಯಕರ್ತೆ ಲೀಲಾವತಿ, ಅಂಗನವಾಡಿ ಕಾರ್ಯಕರ್ತೆ ಶೋಭಾ, ಸಹಾಯಕಿ ಹೇಮಲತಾ, ಕಡಗದಾಳು ಅಂಗನವಾಡಿ ಕಾರ್ಯಕರ್ತೆ ಕೆ.ಆರ್. ಅನಿಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net