

ಹನೂರು: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಗುರುವಾರ ಬಸ್ ಚಕ್ರ ಹರಿದು ಮಹಿಳೆಯೊಬ್ಬರು ಕಾಲು ಮುರಿತಕ್ಕೊಳಗಾಗಿ ತೀವ್ರ ಗಾಯಗೊಂಡಿದ್ದಾರೆ.
ಪಟ್ಟಣದ ಸರೋಜಮ್ಮ (54) ಗಾಯಗೊಂಡವರು. ಇವರು ಬೆಳಗ್ಗೆ 8.30ರ ಸುಮಾರಿನಲ್ಲಿ ಬಸ್ ನಿಲ್ದಾಣದೊಳಗೆ ತೆರಳುತ್ತಿದ್ದರು. ಈ ವೇಳೆ ಕೊಳ್ಳೇಗಾಲದಿಂದ ಆಗಮಿಸಿದ ಕೆಎಸ್‌ಆರ್‌ಟಿಸಿ ಬಸ್ ಪ್ರವೇಶ ದ್ವಾರದಲ್ಲಿ ಡಿಕ್ಕಿ ಹೊಡೆದಿದ್ದು, ಚಕ್ರ ಕಾಲಿನ ಮೇಲೆ ಹರಿದಿದೆ. ಪರಿಣಾಮ ತೀವ್ರ ಗಾಯಗೊಂಡ ಇವರನ್ನು ಸ್ಥಳೀಯರು ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದ ಗಾಯಾಳುವನ್ನು ಕುಟುಂಬಸ್ಥರು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಬಸ್ ವಶಕ್ಕೆ ಪಡೆದರು. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ತಡೆಗೆ ಒತ್ತಾಯ: ಪಟ್ಟಣದ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಯಾವುದೇ ಸೂಚನಾ ಫಲಕವಿಲ್ಲ. ಜತೆಗೆ ಚಾಲಕರ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವಾಗುತ್ತಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಕೊಳ್ಳೇಗಾಲದಿಂದ ಆಗಮಿಸಿದ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರೂ ಮೃತಪಟ್ಟಿದ್ದರು. ಇದೀಗ ಮತ್ತೊಂದು ಅಪಘಾತ ಸಂಭವಿಸಿದೆ. ಜತೆಗೆ ಮಲೈಮಹದೇಶ್ವರ ಬೆಟ್ಟದಿಂದ ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರವೇಶ ದ್ವಾರದಲ್ಲಿ ಬಸ್ ಡಿಕ್ಕಿಯಿಂದ ಇಬ್ಬರು ಗಾಯಗೊಂಡಿದ್ದಾರೆ. ಆದ್ದರಿಂದ ಸಾರಿಗೆ ಇಲಾಖೆಯ ಅಧಿಕಾರಿಗಳು ಚಾಲಕರ ಅಜಾಗರೂಕತೆ ಹಾಗೂ ವೇಗಮಿತಿ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳುವುದರ ಮೂಲಕ ಅಪಘಾತ ತಡೆಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿಬಂತು.