ಗರ್ಭಿಣಿಯರು ತಪ್ಪದೆ ಪೌಷ್ಟಿಕ ಆಹಾರ ಸೇವಿಸಿ

9ark1
Published on

ಅರಕಲಗೂಡು: ಉತ್ತಮ ಆರೋಗ್ಯದ ದೃಷ್ಟಿಯಿಂದ ಗರ್ಭಿಣಿಯರು, ಬಾಣಂತಿಯರು ಹೆಚ್ಚಾಗಿ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸ್ವಾಮಿಗೌಡ ಸಲಹೆ ನೀಡಿದರು.


ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಇತ್ತೀಚೆಗೆ ಅಪೌಷ್ಟಿಕತೆ, ಕ್ಷಯರೋಗ ಪೀಡಿತರು ಹಾಗೂ ಗರ್ಭಿಣಿಯರಿಗೆ ಆಹಾರ ಕಿಟ್, ಮೊಟ್ಟೆ ವಿತರಿಸಿ ಅವರು ಮಾತನಾಡಿದರು. ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಬೇಕು. ಇತ್ತೀಚಿನ ದಿನಗಳಲ್ಲಿ ಅಪೌಷ್ಟಿಕತೆ ಸಾಕಷ್ಟು ಜನರಲ್ಲಿ ಕಂಡು ಬರುತ್ತಿದೆ. ಜನರು ಹೋಟೆಲ್, ರಸ್ತೆ ಬದಿಯಲ್ಲಿ ತಿಂಡಿ ತಿನಿಸು ತಿನ್ನುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಅಪೌಷ್ಟಿಕತೆ ಹೋಗಲಾಡಿಸಲು ಮೊಳಕೆ ಕಾಳು, ತರಕಾರಿ, ಸೊಪ್ಪು ಸೇವಿಸಬೇಕು ಎಂದರು.


ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕ ಪರಶುರಾಮ್ ಶಿರೂರ ಮಾತನಾಡಿ, ಗರ್ಭಿಣಿಯರು ಅಪೌಷ್ಟಿಕತೆ, ರಕ್ತ ಹೀನತೆಯಿಂದ ಬಳಲುತ್ತಿರುವುದು ಕಂಡುಬರುತ್ತಿದೆ. ಸರ್ಕಾರ ಅಂಗನವಾಡಿಗಳಲ್ಲಿ ನೀಡುತ್ತಿರುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗಾಗಿ ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.


ತಾಲೂಕು ರೋಟರಿ ಕ್ಲಬ್ ಅಧ್ಯಕ್ಷ ಪ್ರಭು ಶ್ರೀಧರ, ಕಾರ್ಯದರ್ಶಿ ಪ್ರದೀಪ್, ಸದಸ್ಯರಾದ ಚನ್ನಕೇಶವ ಗೌಡ, ಗಂಗಾಧರ್, ಜಯಕುಮಾರ್, ನಿತಿನ್, ನಿವೃತ್ತ ಶಿಕ್ಷಕ ಮಲ್ಲೇಶ್, ಆಸ್ಪತ್ರೆಯ ಹಿರಿಯ ಶುಶ್ರೂಷಕ ಅಧಿಕಾರಿ ಪಲ್ಲವಿ, ತಾಲೂಕು ಕ್ಷಯ ರೋಗ ಮೇಲ್ವಿಚಾರಕ ಸುಬ್ರಹ್ಮಣ್ಯ, ಪ್ರಯೋಗ ಶಾಲಾ ತಂತ್ರಜ್ಞ ರಾಮಚಂದ್ರ, ಐಸಿಟಿಸಿ ಪ್ರಯೋಗಶಾಲೆ ತಂತ್ರಜ್ಞರಾದ ಗೌರಮ್ಮ, ತನುಜಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net