ಮಾಜಿ ಸಂಸದರ ಪತ್ನಿ ಎಂದು ವಿಡಿಯೋ ಹರಿ ಬಿಟ್ಟ ಮಹಿಳೆ

Fake-document-fir
Published on

ರಾಮನಗರ:  ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ   ವಿಡಿಯೊ ಹರಿಬಿಟ್ಟಿದ್ದು, ಈ ಸಂಬಂಧ  ವಕೀಲ ಪ್ರದೀಪ್ ಎಂಬುವರು ಸುರೇಶ್ ಅವರ ಪರವಾಗಿ‌ ನೀಡಿರುವ ದೂರಿನ ಹಿನ್ನೆಲೆಯಲ್ಲಿ , ರಾಮನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇನ್‌ಸ್ಟಾಗ್ರಾಮ್‌ನಲ್ಲಿ pavitrah256 ಎಂಬ ಹೆಸರಿನಲ್ಲಿ ಹಾಗೂ ಫೇಸ್‌ಬುಕ್‌ನಲ್ಲಿ PavitraDksuresh Dodalahalli ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಮಹಿಳೆ, ಎರಡೂ ಜಾಲತಾಣಗಳಲ್ಲಿ ಏ. 8ರಂದು ವಿಡಿಯೊ ಪೋಸ್ಟ್ ಮಾಡಿದ್ದಾರೆ. ಸುರೇಶ್ ಅವರ ಚಿತ್ರದೊಂದಿಗೆ ತನ್ನ ಚಿತ್ರವನ್ನು ಎಡಿಟ್ ಮಾಡಿ ಜೋಡಿಸಿ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

ಶಾಲೆಯೊಂದರಲ್ಲಿ ಕೆಲಸ ಮಾಡುವ ಮಹಿಳೆ ಮೈಸೂರು ಮೂಲದವರಾಗಿದ್ದಾರೆ. ಪತಿ ಹೆಸರಿನ ಮುಂದೆ ಡಿ.ಕೆ. ಸುರೇಶ್ ಎಂದಿರುವ ನಕಲಿ ಮತದಾರರ ಗುರುತಿನ ಚೀಟಿಯನ್ನು ಸಹ ಪೋಸ್ಟ್ ಮಾಡಿದ್ದಾರೆ. ಎರಡೂ ಖಾತೆಗಳಲ್ಲಿ ಸುರೇಶ್ ಅವರ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲೇನಿದೆ?: ‘ನಾನು ಮೊದಲು ಡಿ.ಕೆ. ಸುರೇಶ್ ಅವರ ಹೆಂಡತಿಯಾಗಿ ಹೇಳಬೇಕೆಂದರೆ, ನಾನು ಫಸ್ಟ್ ಸುರೇಶ್ ಅವರ ಅಭಿಮಾನಿ. ಯಾಕೆಂದರೆ ಅವರು ಮೂರು ಸಲ ಎಂ.ಪಿ.ಯಾಗಿ ಯಾರೂ ಮಾಡಲಿಕ್ಕಾಗದ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂತಹವರನ್ನು ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿಪಡುತ್ತೇನೆ’ ಎಂದು ಮಹಿಳೆ ವಿಡಿಯೊದಲ್ಲಿ ಹೇಳಿದ್ದಾರೆ. 

ದುರುದ್ದೇಶದಿಂದ ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು ಅಪಪ್ರಚಾರ ನಡೆಸುತ್ತಿರುವ ಮಹಿಳೆ, ಸಾರ್ವಜನಿಕವಾಗಿ ತಪ್ಪು ಸಂದೇಶ ಹರಡುತ್ತಿದ್ದಾರೆ. ಸುರೇಶ್ ಅವರ ಸಂಬಂಧಿಕರು ಹಾಗೂ ರಾಜಕಾರಣಿಗಳಿಗೆ ಹತ್ತಿರದವಳು ಎಂದು ಹೇಳಿಕೊಂಡು ನಟಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ದುರುಪಯೋಗಪಡಿಸಿಕೊಂಡಿದ್ದಾಳೆ. ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಠಾಣೆಗೆ ನೀಡಿದ ದೂರಿನಲ್ಲಿ ವಕೀಲ ಪ್ರದೀಪ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net