

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿನ ನಡೆಯುವ ಚುನಾವಣೆಗಳಲ್ಲಿ ಮಹಿಳಾ ಮತದಾರರ ಪಾತ್ರ ಮುಖ್ಯವಾಗಿದೆ, ಚುನಾವಣಾ ಅಭ್ಯರ್ಥಿಗಳು ಮಹಿಳಾ ಮತದಾರರ ಓಲೈಕೆಗೆ ಹೆಚ್ಚು ಮುಗಿಬೀಳುತ್ತಾರೆ ಏಕೆಂದರೆ ಜಿಲ್ಲೆಯಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ.
ಪ್ರಸಕ್ತ ಸಾಲಿನಲ್ಲಿ ಜ.25 ರಂದು ಜಿಲ್ಲಾಡಳಿತಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆಗೆ ಜಿಲ್ಲಾಡಳಿತ ಸಿದ್ದತೆ ನಡೆಸಿರುವ ಹೊತ್ತಿನಲ್ಲಿ ಮಹಿಳಾ ಮತದಾರರ ಪಾತ್ರ ಮುನ್ನಲೆಗೆ ಬಂದಿದೆ.
ಸಾಕ್ಷರತೆ ಮುಖ್ಯ ಕಾರಣ: ದಶಕಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಪ್ರಸ್ತುತ ಮಹಿಳಾ ಮತದಾರರ ಹೆಚ್ಚಳಕ್ಕೆ ಸಾಕ್ಷರತೆಯೂ ಪ್ರಮುಖ ಕಾರಣ ಎನ್ನಲಾಗಿದೆ. ಈ ಹಿಂದೆ ಸಾಕಷ್ಟು ಮಹಿಳೆಯರು ಮತದಾರ ಚೀಟಿ ಪಡೆಯುತ್ತಿರಲಿಲ್ಲ, ಚುನಾವಣೆ ಏನಿದ್ದರೂ ಪುರುಷರಿಗೆ ಮಾತ್ರ ಎಂಬ ಭಾವನೆ ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಹೆಚ್ಚು ಮಹತ್ವ ವಹಿಸಿದ್ದು ಪ್ರಜಾಪ್ರಭುತ್ವ, ಸಂವಿಧಾನ, ಮತದಾನದ ಜಾಗೃತಿ ಹೆಚ್ಚುತ್ತಿದೆ. ಇದರೊಂದಿಗೆ ಜಿಲ್ಲಾಡಳಿತ ಮತದಾನದ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸುತ್ತಿರುವುದು, ಮತದಾರರ ಚೀಟಿ ಪಡೆಯುವ ಪ್ರಕ್ರಿಯೆ ಸರಳಗೊಳಿಸಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂಬ ಮಾತು ಕೇಳಿಬರುತ್ತಿವೆ.
ಕಾಲೇಜುಗಳಲ್ಲಿ ವಿಶೇಷ ಅಭಿಯಾನ:ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಪ್ರತಿ ಕಾಲೇಜುಗಳಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅಧಿಕಾರಿಗಳು ಹೆಚ್ಚು ಗಮನ ನೀಡುತ್ತಿದ್ದಾರೆ. ಈ ಮೊದಲು 18 ತುಂಬಿದ ವಿದ್ಯಾರ್ಥಿಗಳು ಎಷ್ಟೋ ವರ್ಷದ ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳುತ್ತಿದ್ದರು. ಪ್ರಸ್ತುತ ಜಾಗೃತಿ ಲವಾಗಿ ಕಾಲೇಜು ದಿನಗಳಲ್ಲೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗುತ್ತಿರುವುದು ಇದಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕೂ ತಾಲೂಕುಗಳಲ್ಲೂ ಹೆಚ್ಚು:ಜಿಲ್ಲೆಯ 4 ತಾಲೂಕುಗಳಲ್ಲಿನ ಮತದಾರರ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರೇ ಇದ್ದಾರೆ. ದೊಡ್ಡಬಳ್ಳಾಪುರದಲ್ಲಿ 2,21,297 ಮತದಾರರಿದ್ದು, ಅದರಲ್ಲಿ 1,12,171 ಮಹಿಳಾ ಹಾಗೂ 1,09,125 ಪುರುಷ ಮತದಾರರಿದ್ದಾರೆ. ಹೊಸಕೋಟೆಯಲ್ಲಿ 2,40,998 ಮತದಾರರಲ್ಲಿ 1,21,543 ಮಹಿಳೆ ಹಾಗೂ 1,19,434 ಪುರುಷ ಮತದಾರರು ಇದ್ದಾರೆ. ದೇವನಹಳ್ಳಿಯಲಿ 2,18,343 ಮತದಾರರಿದ್ದು, 1,10,457 ಮಹಿಳಾ ಹಾಗೂ 1,07,869 ಪುರುಷ ಮತದಾರರಿದ್ದಾರೆ. ನೆಲಮಂಗಲದಲ್ಲಿ 2,25,086 ಮತದಾರರ ಪೈಕಿ 1,14,488 ಮಹಿಳೆ ಹಾಗೂ 1,10,490 ಪುರುಷ ಮತದಾರರಿದ್ದಾರೆ. ಮತದಾರರ ಲಿಂಗಾನುಪಾತದಲ್ಲಿ ಸಾವಿರ ಪುರುಷರಿಗೆ 1027 ಮಹಿಳೆಯರಿದ್ದಾರೆ. ಅದರಲ್ಲಿ ದೊಡ್ಡಬಳ್ಳಾಪುರದಲ್ಲಿ 1028, ಹೊಸಕೋಟೆಯಲ್ಲಿ 1018, ದೇವನಹಳ್ಳಿ 1024 ಹಾಗೂ ನೆಲಮಂಗಲದಲ್ಲಿ ಅತಿ ಹೆಚ್ಚು 1037 ಲಿಂಗಾನುಪಾತ ಕಂಡುಬಂದಿದೆ.
ಕಾಯುವಂತಿಲ್ಲ:2024ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ 1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ ಮತ್ತು 1ನೇ ಅಕ್ಟೋಬರ್ 2024 ಕ್ಕೆ 18 ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇದರಿಂದ 18 ವರ್ಷಗಳನ್ನು ಪೂರೈಸಿದವರು ನೋಂದಣಿಗಾಗಿ ಮುಂದಿನ ವರ್ಷದ ವಿಶೇಷ ಪರಿಷ್ಕರಣೆಯವರೆಗೆ ಕಾಯುವುದನ್ನು ತಪ್ಪಿಸಲಾಗಿದೆ ಮತ್ತು ಮಧ್ಯಂತರ ಅವಧಿಯಲ್ಲಿ ನಡೆಯುವ ಚುನಾವಣೆಗೆಳಲ್ಲಿ ಮತ ಚಲಾವಣೆಗೆ ಅವಕಾಶ ದೊರೆಯಲಿದೆ.
147 ಇತರೆ ಮತದಾರರು:ಜಿಲ್ಲೆಯಲ್ಲಿ 9,05,724 ಮತದಾರರು ಇದ್ದಾರೆ. ನಾಲ್ಕು ತಾಲೂಕಗಳಲ್ಲಿ 4,46,918 ಪುರುಷ ಮತ್ತು 4,58,659 ಮಹಿಳಾ ಹಾಗೂ 147 ಇತರೆ ಮತದಾರರು ಇದ್ದಾರೆ. ಒಟ್ಟು ಮತದಾರರ ಪೈಕಿ 85 ವರ್ಷ ಮೇಲ್ಪಟ್ಟ 11,114 ಹಿರಿಯ ನಾಗರಿಕರು, 13,431 ವಿಶೇಷ ಚೇತನ ಮತದಾರರು ಹಾಗೂ 121 ಸೇವಾ ಮತದಾರರು ಇದ್ದಾರೆ
-------------
ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿ ವರ್ಷ ನಿರಂತರವಾಗಿ ನಡೆಯುತ್ತಿರುತ್ತದೆ. 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಚುನಾವಣಾ ಪ್ರಕ್ರಿಯೆಯು ಆಡಳಿತ ಯಂತ್ರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಪಾತ್ರವು ಮುಖ್ಯವಾಗಿದ್ದು ಸಹಕಾರ ಹಾಗೂ ಸಹಭಾಗಿತ್ವ ಇರಬೇಕು.
ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ