

ಚಿಕ್ಕಬಳ್ಳಾಪುರ: ಮೊಮ್ಮಕ್ಕಳು ಕೇಳಿದ ಹಿನ್ನೆಲೆಯಲ್ಲಿ ಹಿಂದೆ ಮುಂದೆ ಯೋಚಿಸದೇ ಬೇರೆಯವರ ತೋಟದಲ್ಲಿ ಬೆಳೆದ ಟೊಮ್ಯಾಟೋ ಹಣ್ಣನ್ನು ಕಿತ್ತುಕೊಂಡಿದ್ದು ಗಲಾಟೆಯು ಮನೆಗೆ ನುಗ್ಗಿ ಹಲ್ಲೆ ನಡೆಸುವಂತಹ ಹಂತಕ್ಕೆ ಹೋಗಿದೆ.
ಹಲ್ಲೆಗೊಳಗಾದವರು ಚಿಂತಾಮಣಿ ತಾಲೂಕಿನ ಗಾಜಲಹಳ್ಳಿಯ ಶಾಂತಮ್ಮ. ಹೊಲದಲ್ಲಿ ಕೆಲಸ ಮಾಡುವಾಗ ಮೊಮ್ಮಕ್ಕಳು ಪಕ್ಕದ ಜಮೀನಿನಲ್ಲಿ ಬೆಳೆದಿರುವ ಟೊಮ್ಯಾಟೋ ಹಣ್ಣುಗಳನ್ನು ತಿನ್ನುವ ಆಸೆಯಿಂದ ಕೇಳಿದ್ದಾರೆ. ಇದಕ್ಕೆ ಆಕೆ ಎರಡು ಟೊಮ್ಯಾಟೋ ಕಿತ್ತು ಮಕ್ಕಳಿಗೆ ನೀಡಿದ್ದು ಇದನ್ನು ನೋಡಿದ ತೋಟದ ಮಾಲೀಕ ಸುದರ್ಶನ್ ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಹಲ್ಲೆ ನಡೆಸಿದ್ದಾನೆ. ಇದರಿಂದ ಭಯದಲ್ಲಿ ಮೊಮ್ಮಕ್ಕಳೊಂದಿಗೆ ಮನೆಗೆ ಓಡಿ ಬಂದರೂ ಬಿಟ್ಟಿಲ್ಲ. ಮತ್ತೆ ತೋಟದ ಮಾಲೀಕರ ಕುಟುಂಬವು ದೊಣ್ಣೆಗಳ ಸಮೇತ ಹೋಗಿ, ಮನೆಯಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ. ಕೊನೆಗೆ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ಘಟನೆಯು ಗ್ರಾಮದಲ್ಲಿ ಶಾಂತಿ ನೆಮ್ಮದಿಯನ್ನು ಕೆಡಿಸಿದ್ದು ಹಿರಿಯ ಮುಖಂಡರೂ ರಾಜೀ ಪಂಚಾಯ್ತಿ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಸುಮ್ಮನಾಗಿದ್ದಾರೆ. ಇದರಿಂದ ನೊಂದ ಮಹಿಳೆಯು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.