ಮುಟ್ಟಿನ ಬಗ್ಗೆ ಬೇಡ ಭಯ

29-DVD-9 - Copy
Published on

ದೇವದುರ್ಗ: ಮಹಿಳೆಯರಲ್ಲಿ ಮುಟ್ಟು ಸಹಜ ಪ್ರಕ್ರಿಯೆಯಾಗಿದ್ದು, ಇದರ ಬಗ್ಗೆ ಪ್ರತಿಯೊಬ್ಬರಿಗೂ ಜ್ಞಾನ ಅಗತ್ಯ. ಈ ಕುರಿತು ಅಂಜಿಕೆ ಹಾಗೂ ಹಿಂಜರಿಕೆಗೆ ಒಳಗಾಗದೆ ವೈದ್ಯರು, ಹಿರಿಯ ಸಲಹೆ ಪಡೆದು ಆರೋಗ್ಯ ನಿಯಮ ಅನುಸರಿಸಬೇಕು ಎಂದು ವೈದ್ಯಾಧಿಕಾರಿ ನಿರ್ಮಲಾ ದೇವಿ ಹೇಳಿದರು.

ಪಟ್ಟಣದ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಮುಟ್ಟಿನ ನೈರ್ಮಲ್ಯ ದಿನದ ಕಾರ್ಯಕ್ರಮದಲ್ಲಿ ಭಾನುವಾರ ಉಪನ್ಯಾಸ ನೀಡಿದರು. ಮುಟ್ಟಿನ ಸಮಯದಲ್ಲಿ ಹಲವು ಸಮಸ್ಯೆಗಳು ಎದುರಾಗಲಿವೆ. ಭಯಪಡದೆ ರಕ್ಷಣಾ ವಿಧಾನಗಳನ್ನು ಅನುಸುರಿಸುವುದರೊಂದಿಗೆ ಸ್ಯಾನಿಟರಿ ಪ್ಯಾಡ್‌ಗಳ ಬಳಕೆ ಮಾಡಬೇಕು ಎಂದರು.

ವಿದ್ಯಾರ್ಥಿನಿಯರಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚನೆ ಕೇಂದ್ರವಿದ್ದು, ಅಲ್ಲಿ ಅಗತ್ಯ ಸಲಹೆ, ಸೂಚನೆ ಪಡೆಯಬೇಕು. ಮುಟ್ಟಿನ ಸಂದರ್ಭದಲ್ಲಿ ಅವೈಜ್ಞಾನಿಕ ಹಾಗೂ ಮೂಢನಂಬಿಕೆಗಳನ್ನು ಅನುಸರಿಸಬಾರದು. ವಿದ್ಯಾರ್ಥಿನಿಯರು ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ನಿರ್ಮಲಾ ದೇವಿ ಸಲಹೆ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ, ವಾರ್ಡನ್ ರಾಜಶ್ರೀ, ವಿಜಯಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net