

ಬೆಳಗಾವಿ: ತೀವ್ರ ಕುತ್ತಿಗೆ ನೋವು, ಕೈ-ಕಾಲುಗಳಲ್ಲಿ ದೌರ್ಬಲ್ಯ ಮತ್ತು ಆಹಾರ ಮತ್ತು ದ್ರವ ಪದಾರ್ಥಗಳನ್ನು ಸೇವಿಸಲು ಕಷ್ಟಪಡುತ್ತಿದ್ದ ಮಹಿಳೆಯು ಚಿಯಾರಿ ಮಾಲ್ಫಾರ್ಮೇಶನ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಳು. ಮಹಿಳೆಗೆ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನೆರವೇರಿಸಿದ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಯಿಲೆಯಿಂದ ಬಳಲುತ್ತಿದ್ದ ನಿಪ್ಪಾಣಿ ಮೂಲದ 38 ವರ್ಷದ ಮಹಿಳೆಯ ಪ್ರಾಣಕ್ಕೆ ತೊಂದರೆಯಾಗಿತ್ತು. ಮಿದುಳು ಮತ್ತು ಬೆನ್ನುಮೂಳೆ ಸ್ಕ್ಯಾನ್ ಮಾಡಿ ನೋಡಿದಾಗ ಅತ್ಯಂತ ಅಪರೂಪ ಮತ್ತು ಸಂಕೀರ್ಣತೆಯಿಂದ ಕೂಡಿದ ಕಾಯಿಲೆಯಿಂದ ಬಳಲುತ್ತಿರುವುದು ಕಂಡುಬಂತು. ಇದು ಕ್ರೆನಿಯೋ ವರ್ಟೆಬ್ರಲ್ ಸಂಧಿಯ ಎಲುಬು ಮತ್ತು ಮೃದು ಅಂಗಾಂಶಗಳ ಅಸಹಜತೆಯಿಂದ ಮಿದುಳು ಕಾಂಡ, ಕುತ್ತಿಗೆ ಹಾಗೂ ಬೆನ್ನುಮೂಳೆ ಮೇಲೆ ಪರಿಣಾಮ ಬೀರಿ ನರಮಂಡಲ ವ್ಯವಸ್ಥೆ ಘಾಸಿಗೊಳಿಸುತ್ತದೆ. ಇದರಿಂದ ವ್ಯಕ್ತಿಯು ಕುಗ್ಗಿ ಹೋಗುತ್ತಾನೆ. ಇದು ವಯಸ್ಕರಲ್ಲಿ ಕಂಡುಬರುತ್ತದೆ. ಅದನ್ನು ಶೀಘ್ರ ಪತ್ತೆ ಮಾಡಿ ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸದಿದ್ದರೆ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಸುಮಾರು 6 ಗಂಟೆ ನಿರಂತರ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಯು ಕೇವಲ 4 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದರು.
ರೋಗದ ಮಾಹಿತಿ: ಚಿಯಾರಿ ಎನ್ನುವುದು ನರಮಂಡಲದ ಅತ್ಯಂತ ಸೂಕ್ಷ್ಮ ಭಾಗದ ಮೇಲೆ ಪರಿಣಾಮ ಬೀರುವ ಅಪರೂಪದ ಕಾಯಿಲೆ. ಇದು ಮಿದುಳಿನ ಕಾಂಡ, ಮೇಲಿನ ಬೆನ್ನುಹುರಿ ಮತ್ತು ಬೆನ್ನುಮೂಳೆಯ ಅಪಧಮನಿಗಳನ್ನು ಒಳಗೊಂಡಿರುವ ಬೆನ್ನುಮೂಳೆಯ ಜಂಕ್ಷನ್. ನರ ಶಸ್ತ್ರಚಿಕಿತ್ಸಕ ಡಾ.ಅಭಿಷೇಕ ಪಾಟೀಲ ಅವರಿಗೆ ನರರೋಗ ಅರಿವಳಿಕೆ ತಜ್ಞವೈದ್ಯ ಡಾ.ನರೇಂದ್ರ ಪಾಟೀಲ, ಡಾ.ಟೀನಾ ದೇಸಾಯಿ, ಫಿಸಿಯೋಥೆರಪಿಸ್ಟ್ ಡಾ.ಗಾಯಿತ್ರಿ ಗುರವ ಹಾಗೂ ಡಾ.ಅಫ್ನಾನ್ ಸಹಕರಿಸಿದರು. ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಡಾ.ಅಭಿಷೇಕ ಪಾಟೀಲ ಹಾಗೂ ಅವರ ತಂಡವನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಅಭಿನಂದಿಸಿದ್ದಾರೆ.