ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆಗೆ ಗಾಯ

ಚಿತ್ರ 15ಎಸ್ ಡಿ ಪಿ 1
ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ಮಹಿಳೆ.
Published on

ಸಿದ್ದಾಪುರ: ಸಮೀಪದ ಗುಹ್ಯ ಪಳ್ಳಕೆರೆ ಸುಬ್ಬಯ್ಯ ಅವರ ಕಾಫಿ ತೋಟದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ತೋಟದ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕ ಮಹಿಳೆ ಮೇಲೆ ಕಾಡಾನೆಯೊಂದು ಹಠಾತ್ತನೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ.

ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಅಮಿರನಾ (35) ಎಂಬಾಕೆ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡು ಮಂಗಳೂರು ವೆನಲಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತೋಟದ ಲೈನ್‌ಮನೆಯಲ್ಲಿ ವಾಸವಾಗಿರುವ ಅಮಿರಿನಾ ಎಂದಿನಂತೆ ಇತರ ಕಾರ್ಮಿಕರೊಂದಿಗೆ ತೋಟಕ್ಕೆ ಕೆಲಸಕ್ಕೆ ತೆರಳಬೇಕಾಗಿತ್ತು. ಆದರೆ ತಡವಾಗಿದ್ದರಿಂದ ಒಬ್ಬಂಟಿಯಾಗಿ ತೋಟಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆಯೊಂದು ಮಹಿಳೆ ಮೇಲೆ ದಾಳಿ ಮಾಡಿ ದಂತದಿಂದ ತಿವಿದು ತಲೆಗೆ ಗಾಯಗೊಳಿಸಿದ್ದಲ್ಲದೆ ಕಾಲಿನಿಂದ ಒದ್ದು ಬೆನ್ನಿಗೂ ಗಂಭೀರ ಗಾಯಗೊಳಿಸಿದೆ.

ಆಕ್ರೋಶಗೊಂಡಿದ್ದ ಕಾಡಾನೆಯ ಕಿರುಚಾಟದಿಂದ ಸಮೀಪದಲ್ಲಿದ್ದ ನಾಯಿವೊಂದು ಬೊಗಳಿದ ಪರಿಣಾಮ ಲೈನ್ ಮನೆಯಲ್ಲಿದ್ದವರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.

ನಂತರ ಕಾಡಾನೆ ಕಾಫಿ ತೋಟದಿಂದ ತೆರಳಿದೆ. ಇತರ ಕಾರ್ಮಿಕರು ಸೇರಿ ಮಹಿಳೆಯನ್ನ ಸಿದ್ದಾಪುರ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಗಂಭೀರ ಗಾಯಗಳಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನಲಕ್ ಆಸ್ಪತ್ರೆಗೆ ದಾಖಲಿಸಲಾಯಿತು.

ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕೆಪಿಸಿಸಿ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಭೇಟಿ ನೀಡಿ ಮಹಿಳೆಗೆ ಧೈರ್ಯ ತುಂಬಿದರು. ನಂತರ ಮಾತನಾಡಿದ ಅವರು, ಕಾಡಾನೆ ದಾಳಿ ಕುರಿತು ಶಾಸಕ ಪೊನ್ನಣ್ಣ ಅವರ ಗಮನಕ್ಕೆ ತರಲಾಗಿದ್ದು ಅವರ ನಿರ್ದೇಶನದ ಮೇರೆಗೆ ಮಹಿಳೆಗೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇಲಾಖೆಯಿಂದಲೇ ಚಿಕಿತ್ಸೆ ವೆಚ್ಚವನ್ನು ಭರಿಸಲಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದರು.

ಕೆಲ ದಿನಗಳಿಂದ ಗುಹ್ಯ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆವೊಂದು ಬಿಡು ಬಿಟ್ಟಿದ್ದು ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳು ನೆಮ್ಮದಿಯಾಗಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಶಾಸಕ ಎ.ಎಸ್ ಪೊನ್ನಣ್ಣ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ಕೂಡಲೇ ಆನೆಯನ್ನು ಸೆರೆ ಹಿಡಿಯಬೇಕೆಂದು ಸೂಚಿಸಿದ್ದಾರೆ.

ವಿರಾಜಪೇಟೆ ಡಿಎಫ್‌ಒ ಶರಣಬಸಪ್ಪ, ಎಸಿಎಫ್ ನೆಹರು, ವಲಯ ಅರಣ್ಯಾಧಿಕಾರಿ ಕಳ್ಳಿರ ಎಂ.ದೇವಯ್ಯ, ಉಪ ವಲಯರಣಾಧಿಕಾರಿ ಸಂಜಿತ್ ಸೋಮಯ್ಯ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net