

ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕಣಿಯಾರುಮಲೆ ರಕ್ಷಿತಾರಣ್ಯ ವ್ಯಾಪ್ತಿಯ ಅಂಚಿನಲ್ಲಿರುವ ಕೆಎಫ್‌ಡಿಸಿ ರಬ್ಬರ್ ತೋಟದಲ್ಲಿ ಮಂಗಳವಾರ ಬೆಳಗ್ಗೆ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಸೆಲ್ಲಮ್ಮ(65) ಎಂಬುವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
ಕೆಎಫ್‌ಡಿಸಿಯಲ್ಲಿ ಕಾಯಂ ಕಾರ್ಮಿಕೆಯಾಗಿ ಕೆಲಸ ವಾಡುತ್ತಿದ್ದ ಸೆಲ್ಲಮ್ಮ ನಿವೃತ್ತಿ ಬಳಿಕ ಇತರ ಕಾರ್ಮಿಕರಿಗೆ ಸಹಾಯಕರಾಗಿ ಕೆಲಸಕ್ಕೆ ಹೋಗುತ್ತಿದ್ದರು. ಕೊಳ್ತಿಗೆ ಗ್ರಾಮದ ಕಣಿಯಾರು ಹರ್ತ್ಯಡ್ಕ ಸಿಆರ್‌ಸಿ ಕಾಲನಿಯ ಮನೆಯಿಂದ ಒಂದೂವರೆ ಕಿ.ಮೀ. ದೂರದ ಆನಡ್ಕ ಎಂಬಲ್ಲಿ ಬೆಳಗ್ಗೆ 7.15ರ ವೇಳೆಗೆ ಟ್ಯಾಪಿಂಗ್ ಕೆಲಸ ವಾಡುತ್ತಿದ್ದ ವೇಳೆ ಕಾಡಾನೆ ದಾಳಿ ವಾಡಿ, ಬೆನ್ನಟ್ಟಿ ತುಳಿದಿದೆ. ಬೆನ್ನು ಮತ್ತು ತಲೆ ಭಾಗಕ್ಕೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಡಾನೆ ದಾಳಿ ಘಟನೆ ಇತರ ಕಾರ್ಮಿಕರ ಗಮನಕ್ಕೆ ಬಂದಿರಲಿಲ್ಲ. ಆದರೆ ಆನೆ ಅಲ್ಲಿಂದ ಕೊಳ್ತಿಗೆ ಕಡೆಗೆ ತೆರಳುತ್ತಿರುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ.
ಸೆಲ್ಲಮ್ಮ ಒಂಟಿಯಾಗಿ ವಾಸವಿದ್ದರು. ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಕೆಯ್ಯೂರಿನಲ್ಲಿ ನೆಲೆಸಿರುವ ಪುತ್ರ ಟಿ.ಯೋಗರಾಜ ನೀಡಿರುವ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ಕುವಾರ್ ರೈ, ತಹಸೀಲ್ದಾರ್ ಪುರಂದರ ಹೆಗ್ಡೆ, ಅರಣ್ಯ ಇಲಾಖೆ ಮತ್ತು ಕೆಎಫ್‌ಡಿಸಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು, ಕೆಯ್ಯೂರು ಮತ್ತು ಕೊಳ್ತಿಗೆ ಗ್ರಾಪಂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.