

ಮಂಡ್ಯ: ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಬರೋಬರಿ 13 ಕೆ.ಜಿ ತೂಕದ ಗಡ್ಡೆಯನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಇದು ಮಿಮ್ಸ್‌ನ ಇತಿಹಾಸದಲ್ಲಿಯೇ ಮೊದಲ ಪ್ರಕರಣವಾಗಿದೆ.
ನೆರೆ ಜಿಲ್ಲೆಯ 45 ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ಗಡ್ಡೆಯನ್ನು ಹೊರಗೆ ತೆಗೆಯಲು ಸುಮಾರು ಒಂದು ಗಂಟೆಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅದರಂತೆ ಶಸ್ತ್ರಚಿಕಿತ್ಸೆ ಬಳಿಕ ಆಕೆ ಆರೋಗ್ಯವಾಗಿದ್ದಾರೆ.
ಏನಿದು ಪ್ರಕರಣ?: ಮಹಿಳೆಗೆ ಕಳೆದ ಆರು ತಿಂಗಳಿಂದ ಹೊಟ್ಟೆ ನೋವಿತ್ತು. ಅದರಂತೆ ಆಕೆ ಅಲ್ಲಿಯೇ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೂ ಗುಣಮುಖವಾಗಲಿಲ್ಲ. ಮುಖ್ಯವಾಗಿ ಹೊಟ್ಟೆಯಲ್ಲಿ ಗಡ್ಡೆ ಬೆಳೆದುಕೊಂಡಿರುವ ಮಾಹಿತಿಯೇ ಗೊತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೇರೊಬ್ಬರ ಸಲಹೆ ಮೇರೆಗೆ ಹದಿನೈದು ದಿನದ ಹಿಂದೆ ಮಿಮ್ಸ್‌ಗೆ ಬಂದಿದ್ದಾರೆ.
ಮಿಮ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರಾದ ಡಾ.ಆರ್.ಮನೋಹರ್ ಹಾಗೂ ಡಾ.ಸಂಧ್ಯಾ ಮಹಿಳೆಗೆ ವಿವಿಧ ಪರೀಕ್ಷೆ ನಡೆಸಿದ್ದಾರೆ. ಇದರಿಂದ ಅಂಡಾಶಯದಲ್ಲಿ ಗಡ್ಡೆ ಇರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿದ್ದು, ಏ.1ರಂದು ಶಸ್ತ್ರಚಿಕಿತ್ಸೆಗೆ ದಿನ ನಿಗದಿ ಮಾಡಲಾಗಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಡಾ.ಆರ್.ಮನೋಹರ್, ಡಾ.ಸಂಧ್ಯಾ, ಅರಿವಳಿಕೆ ತಜ್ಞರಾದ ಡಾ.ವಿನಯ್, ಡಾ.ಕಿರಣ್, ಶುಶ್ರೂಷಕಿ ದೀಪ್ತಿ, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಾದ ಡಾ.ಮಾಧುರಿ ಹಾಗೂ ಡಾ.ಸ್ನೇಹಾ ತಂಡ ಸುಮಾರು ಒಂದು ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ತೆಗೆಯುವಲ್ಲಿ ಸಫಲರಾಗಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ಮಹಿಳೆ ಆರೋಗ್ಯವಾಗಿದ್ದಾರೆ. ಇನ್ನೂ ಒಂದು ವಾರ ಮಿಮ್ಸ್‌ನಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ.
ನೆರೆ ಜಿಲ್ಲೆಯ ಮಹಿಳೆಯೊಬ್ಬರು ಹೊಟ್ಟೆ ನೋವೆಂದು ಮಿಮ್ಸ್‌ಗೆ ಬಂದಿದ್ದರು. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರಾದ ಡಾ.ಆರ್.ಮನೋಹರ್ ಹಾಗೂ ಡಾ.ಸಂಧ್ಯಾ ನೇತೃತ್ವದಲ್ಲಿ ಕೂಲಂಕಷವಾಗಿ ತಪಾಸಣೆ ನಡೆಸಿದರು. ಬಳಿಕ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ 13 ಕೆ.ಜಿ ತೂಕದ ಗಡ್ಡೆ ಹೊರ ತೆಗೆಯಲಾಗಿದೆ. ಇದು ಮಿಮ್ಸ್‌ನ ಇತಿಹಾಸದಲ್ಲಿಯೇ ಮೊದಲ ಪ್ರಕರಣ. ಶಸ್ತ್ರ ಚಿಕಿತ್ಸೆ ಬಳಿಕ ಮಹಿಳೆ ಆರೋಗ್ಯವಾಗಿದ್ದಾರೆ. ಡಾ.ನರಸಿಂಹಮೂರ್ತಿ ಮಿಮ್ಸ್ ನಿರ್ದೇಶಕ ಮಹಿಳೆಯ ಹೊಟ್ಟೆಯಲ್ಲಿ ಗಡ್ಡೆ ಇರುವುದು ಮೊದಲ ಪರೀಕ್ಷೆಯಲ್ಲಿಯೇ ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ಮತ್ತಷ್ಟು ಪರೀಕ್ಷೆ ಜತೆಗೆ ಚಿಕಿತ್ಸೆ ನೀಡಲಾಯಿತು. ನಮ್ಮ ತಂಡ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿಯಾಗಿದೆ. ಇನ್ನೊಂದು ವಾರ ಮಹಿಳೆಗೆ ಚಿಕಿತ್ಸೆ ನೀಡಲಾಗುವುದು. ಡಾ.ಆರ್.ಮನೋಹರ್ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ, ಮಿಮ್ಸ್