ಅಪಾರ್ಟ್​​ಮೆಂಟ್​ನ 19ನೇ ಮಹಡಿಯಿಂದ ಹಾರಿ ಪ್ರಾಣ ಕಳ್ಕೊಂಡ ಮಹಿಳೆ!

Pub crime
Published on

ಬೆಂಗಳೂರು: ಇತ್ತೀಚೆಗೆ ಶಾಲಾ ಬಾಲಕನೊಬ್ಬ ಅಪಾರ್ಟ್​ಮೆಂಟ್​ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈಗ ಅದನ್ನು ನೆನಪಿಸುವಂಥ ಇನ್ನೊಂದು ಘಟನೆ ನಡೆದಿದ್ದು, ಮಹಿಳೆಯೊಬ್ಬಳು 19ನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಈ ಮಹಿಳೆ ಅಪಾರ್ಟ್‌ಮೆಂಟ್‌ನ 19ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಲಘಟ್ಟಪುರದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಚರಿಸ್ಮಾ ಸಿಂಗ್ (40) ಆತ್ಮಹತ್ಯೆ ಮಾಡಿಕೊಂಡವರು.

ತಲಘಟ್ಟಪುರದ ಹಾಲಿಡೇ ವಿಲೇಜ್ ರಿಸಾರ್ಟ್ ರಸ್ತೆಯಲ್ಲಿರುವ ಪೂರ್ವ ಹೈಲ್ಯಾಂಡ್ ಅಪಾರ್ಟ್‌ಮೆಂಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ಹನ್ನೆರಡು ವರ್ಷಗಳ ಹಿಂದೆ ಚರಿಸ್ಮಾ ಸಿಂಗ್ ಮದುವೆಯಾಗಿದ್ದು, ಇವರಿಗೆ ಒಂದು ವರ್ಷದ ಮಗು ಕೂಡ ಇದೆ. ಕಳೆದ 10 ವರ್ಷಗಳಿಂದ ಪತಿಯೊಂದಿಗೆ ಕೆನಡದಲ್ಲಿ ನೆಲೆಸಿದ್ದರು. ಚಿಕಿತ್ಸೆಗೆಂದು ಇತ್ತೀಚೆಗೆ ತಾಯಿ ಮನೆಗೆ ಬಂದಿದ್ದರು.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಈಕೆ ಅದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಮಧ್ಯಾಹ್ನ ಸುಮಾರು 1 ಗಂಟೆ ಸಂದರ್ಭದಲ್ಲಿ ತಾವು ವಾಸವಿದ್ದ ಅಪಾರ್ಟ್‌ಮೆಂಟ್‌ನ 19ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಳಕ್ಕೆ ಹಾರಿ ಬಿದ್ದಿದ್ದನ್ನು ಕಂಡ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬರುವಷ್ಟರಲ್ಲಿ ಚರಿಸ್ಮಾ ಸಿಂಗ್ ಅವರು ಕೊನೆಯುಸಿರೆಳೆದಿದ್ದಾರೆ. ಶವವನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮಹಿಳೆಯ ಸಹೋದರ ಗೌತಮ್ ಸಿಂಗ್ ನೀಡಿದ ದೂರಿನನ್ವಯ ತಲಘಟ್ಟ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net