

ರಾಣೆಬೆನ್ನೂರ: ನಿನ್ನ ಮಗ ನಮ್ಮ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿ ಯುವಕನ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋಇಚ್ಛೆ ಥಳಿಸಿದ ಅಮಾನವೀಯ ಘಟನೆ ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಹನುಮವ್ವ ದುರ್ಗಪ್ಪ ಮೇಡ್ಲೇರಿ (50) ಹಲ್ಲೆಗೊಳಗಾದ ಮಹಿಳೆ. ಅದೇ ಗ್ರಾಮದ ಚಂದ್ರಪ್ಪ, ಗಂಗಪ್ಪ ಹಾಗೂ ಗುತ್ತೆವ್ವ ಹಲ್ಲೆ ನಡೆಸಿದ ಆರೋಪಿಗಳು.
ಹನುಮವ್ವಳ ಮಗ ಮಂಜುನಾಥ ಎಂಬುವನು ಯುವತಿಯೊಬ್ಬಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ ಆಕೆಯ ಕುಟುಂಬದವರು ನಿನ್ನ ಮಗ ಎಲ್ಲಿದ್ದಾನೆ ಹೇಳು ಎಂದು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ನಂತರ ಹನುಮವ್ವಳನ್ನು ಮನೆ ಮುಂದಿನ ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹನುಮವ್ವ ಆರೋಪಿಸಿದ್ದಾಳೆ.
ಗಾಯಗೊಂಡ ಹನುಮವ್ವಳನ್ನು ನಗರದ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.