ಹೃದಯಾಘಾತದಿಂದ ಮಹಿಳೆ ದುರ್ಮರಣ

driver heart attack
Published on

ನರಗುಂದ: ಪಟ್ಟಣದ ತೋಟದಕೇರಿ ಬಡಾವಣೆಯಲ್ಲಿ ಹೃದಯಾಘಾತದಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ದಾವಲಬಿ ಮಾಬುಸಾಬ್ ಮಳಗಲಿ (58) ಮೃತ ದುರ್ದೈವಿ. ಮನೆ ತೆರವು ಸಂಬಂಧ ದಾವಲಬಿಗೆ ನೋಟಿಸ್ ನೀಡಲಾಗಿದ್ದು, ಮನೆ ಕಳೆದುಕೊಳ್ಳುವ ಭಯದಲ್ಲಿಯೇ ಹೃದಯಾಘಾತವಾಗಿದೆ ಎಂದು ನಿವಾಸಿಗಳಾದ ಸಂಗಪ್ಪ ಜಾಲಿಹಾಳ, ಅಮೀನಬಿ ಭಾಂಗಿ ಆರೋಪಿಸಿದ್ದಾರೆ.
ಏನಿದು ಪ್ರಕರಣ: ದಾವಲಬಿ ಸೇರಿ 69ಕ್ಕೂ ಅಧಿಕ ಕುಟುಂಬಗಳು ತೋಟದಕೇರಿ ಬಡಾವಣೆಯ ಸರ್ಕಾರಿ ಕೆರೆ ದಂಡೆ ಮೇಲೆ 40 ವರ್ಷಗಳಿಂದ ನೆಲೆಸಿದ್ದಾರೆ. ಕೋರ್ಟ್ ಸೂಚನೆ ಮೇರೆಗೆ ಮನೆ ತೆರವಿಗೆ ಎಲ್ಲ ಕುಟುಂಬಗಳಿಗೆ ನೋಟಿಸ್ ನೀಡಲಾಗಿತ್ತು. ನಿವಾಸಿಗಳು ಬೇರೆ ಕಡೆ ಶಾಶ್ವತ ಸೂರು ಕಲ್ಪಿಸಲು ಪಟ್ಟು ಹಿಡಿದಿದ್ದರು. ಜೂ.10ರಂದು ಅಂತಿಮ ವಿಚಾರಣೆ ನಡೆಸಿದ ನ್ಯಾಯಾಲಯ ತೆರವಿಗೆ ಆ.14ರ ಗಡುವು ನೀಡಿತ್ತು. ಆದರೆ, ಪುರಸಭೆಯಿಂದ ಪರ್ಯಾಯ ಮನೆ ಗುರುತಿಸುವ ಕಾರ್ಯ ಆಗಿರಲಿಲ್ಲ.
ಮುಂದಿನ ತಿಂಗಳು ನಮ್ಮ ಮನೆ ತೆರವುಗೊಳಿಸಬೇಕು. ಇಲ್ಲದಿದ್ದರೆ ಪೊಲೀಸರು ಬಂಧಿಸಲಿದ್ದಾರೆ ಎಂಬ ವದಂತಿ ಬಡಾವಣೆಯಲ್ಲಿ ಹರಡಿತ್ತು. ಅಕ್ಕಪಕ್ಕದ ಮನೆಯವರು ನಿತ್ಯವೂ ಇದೇ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಹೀಗೆ ಮಾತನಾಡುವಾಗಲೇ ಮಂಗಳವಾರ ಬೆಳಗ್ಗೆ 7ಗಂಟೆ ದಾವಲಬಿಗೆ ಹೃದಯಾಘಾತವಾಗಿದೆ. ಶುಕ್ರವಾರದಿಂದ ಪಟ್ಟಣದ ಪುರಸಭೆ ಕಚೇರಿ ಮುಂದೆ ಸ್ವಂತ ನಿವೇಶನ ಅಥವಾ ಆಶ್ರಯ ಮನೆಗೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net