

ದೊಡ್ಡಬಳ್ಳಾಪುರ: ಗುಮ್ಮನಹಳ್ಳಿ ಲಿಂಗಧೀರನಹಳ್ಳಿ ಗೇಟ್ ನಡುವಿನ ತಿರುವಿನಲ್ಲಿ ಭಾನುವಾರ ಸಂಜೆ ಸ್ಕೂಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧುಗಿರಿ ತಾಲೂಕು ಬಿಜವಾರ ಗ್ರಾಮದ ಶೈಲಜಾ (42) ಮೃತೆ. ಬಿಜವಾರ ಗ್ರಾಮದ ನವೀನ್ ಕುಮಾರ್ (19), ನೇಪಾಳ ಮೂಲದ ಅರ್ಜುನ್ ಸಿಂಗ್ (30) ಮತ್ತು ಕತ್ರಾ ಸಿಂಗ್ (27) ಗಂಭೀರವಾಗಿ ಗಾಯಗೊಂಡವರು. ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ಸೇರಿಸಲು ಆಂಬುಲೆನ್ಸ್ಗಾಗಿ ಕರೆ ಮಾಡಲಾಯಿತು. ಆದರೆ, ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬಾರದ ಕಾರಣ, ಸುಮಾರು ಒಂದು ಗಂಟೆ ಕಾಲ ನಾಲ್ವರು ಗಾಯಾಳುಗಳು ನಡುರಸ್ತೆಯಲ್ಲೇ ಪರದಾಡುವಂತಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ವೇಳೆ ಈ ಮಾರ್ಗದಲ್ಲಿ ತೆರಳುತ್ತಿದ್ದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರು ಕಾರು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲದೆ, ಕಾರಿನಲ್ಲಿದ್ದ ತಮ್ಮ ಕುಟುಂಬ ಸದಸ್ಯರನ್ನು ಕೆಳಗಿಳಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಗಸ್ತು ವಾಹನದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ್ದನ್ನು ಕಂಡು ಕೆರಳಿದ ಯುವಕರು, ಆಸ್ಪತ್ರೆ ಬಾಗಿಲಿಗೆ ಬೇಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸಾಸಲು ಹೋಬಳಿ ಕೇಂದ್ರವಾಗಿದ್ದು, ದಿನದ 24 ಗಂಟೆಯೂ ಸರ್ಕಾರಿ ಆಸ್ಪತ್ರೆ ಕಾರ್ಯನಿರ್ವಹಿಸಬೇಕು. ಆದರೆ, ಇಲ್ಲಿ ವೈದ್ಯಕಿಯ ಸಿಬ್ಬಂದಿ ಕೊರತೆ ಇದೆ. ಇದರಿಂದ ಇಲ್ಲಿ ದಾಖಲಾಗುವವರಿಗೆ ವೈದ್ಯಕಿಯ ಸೌಲಭ್ಯ ಸಿಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.