

ವಿರಾಜಪೇಟೆ: ವಿರಾಜಪೇಟೆಯ ಕೊಟ್ಟೋಳ್ಳಿಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿರಾಜಪೇಟೆ ತಾಲೂಕು ಕರಡ ನಿವಾಸಿ ದಿವಂಗತ ಕಟ್ಟಿ ಬಿದ್ದಪ್ಪ ಶೀಲಾ ದಂಪತಿಯ ಪುತ್ರಿ ಕಾವೇರಮ್ಮ (24) ಮೃತರು. ಕೊಟ್ಟೋಳಿ ಗ್ರಾಮ ನಿವಾಸಿ ದಿನೇಶ್ ಅವರು ಕಾವೇರಮ್ಮ ಅವರನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತಿ ಮತ್ತು ಪತ್ನಿ ಇಬ್ಬರು ಖಾಸಗಿ ಉದ್ಯೋಗದಲ್ಲಿದ್ದರು.
ನಂತರ ನಗರ ಬಿಟ್ಟು ಸ್ವಗೃಹದಲ್ಲಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ಇತ್ತೀಚೆಗೆ ಕಾವೇರಮ್ಮಳ ತಂದೆ ಕಟ್ಟಿ ಬಿದ್ದಪ್ಪ ನಿಧನರಾಗಿದ್ದರು. ಹಾಗಾಗಿ, ಅವರ ಶ್ರಾದ್ಧ ಮಾಡಲು ಕುಟುಂಬವು ಭಾಗಮಂಡಲಕ್ಕೆ ತೆರಳಿತ್ತು. ಈ ವೇಳೆ ಪತಿಯ ನಿವಾಸದಲ್ಲಿ ತನ್ನ 14 ದಿನದ ಮಗು, ಪತಿ, ಅತ್ತೆಯೊಂದಿಗೆ ವಾಸವಿದ್ದಳು. ಅಂದು ಸಂಜೆ ಪತಿ ದಿನೇಶ್ ಸನಿಹದ ಕಾಫಿ ತೋಟದಲ್ಲಿ ಕಾಫಿ ಕೊಯ್ದು ಬರುತ್ತೇನೆ ಎಂದು ಹೇಳಿ ತೆರಳಿದ್ದಾನೆ. ದಿನೇಶನ ತಾಯಿ ಕೂಡ ಇತರೆಡೆಗೆ ತೆರಳಿದ್ದರು.
ಈ ವೇಳೆ ಸ್ನಾನದ ಮನೆಯಲ್ಲಿ ನೇಣು ಬಿಗಿದುಕೊಂಡು ಕಾವೇರಮ್ಮ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತಳ ಸಹೋದರ ಎಂ.ಎ. ತಿಮ್ಮಯ್ಯ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.