

ಪಿರಿಯಾಪಟ್ಟಣ: ನಿರಂತರ ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದು, ಮಹಿಳೆಯ ಕೈಯಲ್ಲಿ ಇದ್ದ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.
ತಾಲೂಕಿನ ಕಗ್ಗುಂಡಿ ಗ್ರಾಮದ ಹೇಮಲತಾ(22) ಮೃತ. ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಯ ಗೋಡೆ ಶಿಥಿಲಗೊಂಡಿತ್ತು. ಶುಕ್ರವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ಶಿಥಿಲಗೊಂಡಿದ್ದ ಮನೆಯಗೋಡೆ ಕುಸಿದು ಬಿದ್ದಿದ್ದೆ. ಈ ವೇಳೆ ಗೋಡೆ ಕುಸಿಯುತ್ತಿರುವುದನ್ನು ಗಮನಿಸಿದ ಮಹಿಳೆ ಹೇಮಲತಾ ತನ್ನ ಕೈಯಲ್ಲಿದ್ದ ಒಂದೂವರೆ ವರ್ಷದ ಮಗುವನ್ನು ಮುಂದಕ್ಕೆ ಎಸೆದು ತಾನು ಪಾರಾಗಲು ಪ್ರಯತ್ನಿಸುವಷ್ಟರಲ್ಲಿ ಗೋಡೆ ಏಕಾಏಕಿ ಬಿದ್ದ ಹಿನ್ನೆಲೆಯಲ್ಲಿ ಗೋಡೆಯಡಿ ಸಿಲುಕಿ ಹೇಮಲತಾ ಸ್ಥಳದಲ್ಲಿ ಮತಪಟ್ಟಿದ್ದಾರೆ.
ಮೃತಳ ಪತಿ ಶಿವರಾಜು ತಾಲೂಕು ಕಚೇರಿಯಲ್ಲಿ ಗ್ರಾಮ ಸೇವಕನಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಕರ್ತವ್ಯಕ್ಕೆ ತೆರಳಿದ್ದರು. ಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ವಿಷಯ ತಿಳಿದ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ. ಅಂತ್ಯಸಂಸ್ಕಾರವನ್ನು ಶುಕ್ರವಾರ ಸಂಜೆ ಗ್ರಾಮದ ಜಮೀನಿನಲ್ಲಿ ನೆರವೇರಿಸಲಾಯಿತು. ಈ ಸಂಬಂಧ ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.