ಮಂತ್ರಾಲಯದಿಂದ ಬರುತ್ತಿದ್ದಾಗ ಕಾರಿಗೆ ಲಾರಿ ಡಿಕ್ಕಿ, ಮಹಿಳೆ ಸಾವು

IMG_20251003_231850.jpg
Published on


ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿಯ ೪೪ ಮಾರ್ಗದಲ್ಲಿನ ಬೀಚಗಾನಹಳ್ಳಿ ಕ್ರಾಸ್‌ ಸಮೀಪ ಲಾರಿ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟು, ೬ ಜನರು ಗಾಯಗೊಂಡಿದ್ದಾರೆ.

ಹುಲಿಯೂರು ಮೂಲದ ನಂದಿನಿ (೩೬) ಮೃತೆ. ಮಂತ್ರಾಲಯದಿಂದ ಬೆಂಗಳೂರಿಗೆ ಕಾರಿನಲ್ಲಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಬೀಚಗಾನಹಳ್ಳಿ ಕ್ರಾಸ್‌ ಸಮೀಪ ಶುಕ್ರವಾರ ಅಪಘಾತ ಸಂಭವಿಸಿದೆ. ಲಾರಿಯು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದ ನಂದಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗುಡಿಬಂಡೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

*ಅತಿ ವೇಗದ ಚಾಲನೆ
ಬೆಂಗಳೂರು-ಹೈದರಾಬಾದ್ ಮಾರ್ಗದ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಹುತೇಕ ಎಲ್ಲ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತಿದ್ದು ಅಪಘಾತ ಪ್ರಕರಣಗಳು ಹೆಚ್ಚಿಗೆ ಸಂಭವಿಸಲು ಪ್ರಮುಖ ಕಾರಣವಾಗಿದೆ. ಅಪಾಯಕಾರಿ ತಿರುವು, ಸರ್ವೀಸ್ ರಸ್ತೆಯ ಕ್ರಾಸ್ ಗಳು, ರಸ್ತೆಯ ಸೇತುವೆಗಳ ಬಳಿ ವಾಹನಗಳು ನಿಯಂತ್ರಣ ಕಳೆದುಕೊಳ್ಳುತ್ತಿದ್ದು ಜೀವ ಹಾನಿ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸುರಕ್ಷತೆಯ ಸಂಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net