ಕೊಳ್ಳೇಗಾಲ: ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಬಂದವನು ಲೋನ್ ಕೊಡಿಸುವುದಾಗಿ ನಂಬಿಸಿದ್ದಲ್ಲದೆ ಮಹಿಳೆಯ ಎಟಿಎಂ ಕಾರ್ಡ್ ಬದಲಿಸಿ 40 ಸಾವಿರ ರೂ. ವಂಚನೆ ಮಾಡಿದ್ದಾನೆ.
ತಾಲೂಕಿನ ಕುಂತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಲ್ಕಲ್‌ಪುರ ಗ್ರಾಮಕ್ಕೆ ಶುಕ್ರವಾರ ಅಪರಿಚಿತನೊಬ್ಬ ಖಾಸಗಿ ಬ್ಯಾಂಕ್‌ನ ಮ್ಯಾನೇಜರ್ ಸೋಗಿನಲ್ಲಿ ತೆರಳಿದ್ದಾನೆ. ಗ್ರಾಮದ ನಿವಾಸಿ ದೀಪಾ ಎಂಬ ಮಹಿಳೆಗೆ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಲೋನ್ ಕೊಡಿಸುತ್ತೇನೆ ನಿಮ್ಮ ಬ್ಯಾಂಕ್ ದಾಖಲೆಗಳ ಮಾಹಿತಿ ನೀಡಿ ಎಂದು ಕೇಳಿದ್ದಾನೆ. ಈ ವೇಳೆ ಮಹಿಳೆ ಎಟಿಎಂ ಕಾರ್ಡ್ ನೀಡಿದಾಗ ಆಕೆಯ ಪಾಸ್‌ವರ್ಡ್ ಕೇಳಿಕೊಂಡು ಎಟಿಎಂ ಬದಲಿಸಿದ್ದಾನೆ. ನಂತರ, ಮಹಿಳೆ ಖಾತೆಯಿಂದ 10 ಸಾವಿರ ರೂ.ನಂತೆ 4 ಬಾರಿಗೆ ಒಟ್ಟು 40 ಸಾವಿರ ರೂ. ಡ್ರಾ ಆಗಿರುವ ಸಂದೇಶವು ಮಹಿಳೆಯ ಮೊಬೈಲ್‌ಗೆ ಬಂದಿದೆ. ಗಾಬರಿಗೊಂಡ ಮಹಿಳೆ ಎಟಿಎಂ ಪರಿಶೀಲಿಸಿದಾಗ ಎಟಿಎಂ ಕಾರ್ಡ್ ಬದಲಾಗಿರುವುದು ತಿಳಿದಿದೆ. ಬಳಿಕ ವಂಚನೆಗೊಳಗಾದ ಮಹಿಳೆ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮವಹಿಸಿದ್ದಾರೆ.