ಫೇಸ್‌ಬುಕ್ ಸ್ನೇಹದ ನೆಪದಲ್ಲಿ ಮಹಿಳೆಗೆ 2.67 ಲಕ್ಷ ರೂ. ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಫೇಸ್‌ಬುಕ್ ಮೂಲಕ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬನು ವಿದೇಶದಿಂದ ಪಾರ್ಸೆಲ್ ಕಳುಹಿಸಿರುವುದಾಗಿ ನಂಬಿಸಿ, ಕಸ್ಟಮ್ಸ್ ಶುಲ್ಕ ಸೇರಿದಂತೆ ವಿವಿಧ ನೆಪಗಳನ್ನು ಹೇಳಿ ಮಹಿಳೆಯೊಬ್ಬರಿಂದ ಹಂತ ಹಂತವಾಗಿ 2.67 ಲಕ್ಷ ರೂ. ಪಡೆದು ವಂಚಿಸಿದ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ 46 ವರ್ಷದ ಮಹಿಳೆಗೆ ಸುಮಾರು ಎರಡು ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ ಡಾ.ವಿಲಿಯಂ ಹರ್ಬರ್ಟ್ಸ್ ಎಂಬ ಯುನೈಟೆಡ್ ಕಿಂಗ್ಡಮ್ ಮೂಲದ ವ್ಯಕ್ತಿ ಎಂದು ಪರಿಚಯಿಸಿಕೊಂಡ ಆರೋಪಿ ಫೇಸ್‌ಬುಕ್ ಮೆಸೆಂಜರ್ ಮತ್ತು ವಾಟ್ಸಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ಮಹಿಳೆಯ ವಿಶ್ವಾಸ ಗಳಿಸಿದ್ದಾನೆ.
ನಂತರ ಜೂನ್ 28ರಂದು ಆರೋಪಿ ವಾಟ್ಸಲ್ ಮೂಲಕ ಸಂಪರ್ಕಿಸಿ, ಚಾಕೊಲೇಟ್, ಚಿನ್ನ, ಬ್ಯಾಗ್ ಹಾಗೂ ಹಣ ಇರುವ ಪಾರ್ಸೆಲ್ ಕಳುಹಿಸಿರುವುದಾಗಿ ತಿಳಿಸಿದ್ದಾನೆ. ಬಳಿಕ ಮತ್ತೊಬ್ಬ ವ್ಯಕ್ತಿ ತಾನು ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು, ಮಹಿಳೆಯ ಹೆಸರಿನಲ್ಲಿರುವ ಪಾರ್ಸೆಲ್ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಯಲ್ಲಿ ತಡೆಹಿಡಿಯಲಾಗಿದೆ. ಬಿಡುಗಡೆ ಮಾಡಲು ಕಸ್ಟಮ್ಸ್ ಲಗೇಜ್ ಚಾರ್ಜ್ ಪಾವತಿಸಬೇಕು ಎಂದು ಹೇಳಿದ್ದಾನೆ.
ಇದನ್ನು ನಂಬಿದ ಮಹಿಳೆ ಜೂನ್ 29ರಂದು ಯುಪಿಐ ಮೂಲಕ ರೂ.28,000 ಹಣವನ್ನು ವರ್ಗಾವಣೆ ಮಾಡಿದ್ದಾರೆ. ನಂತರ ಪಾರ್ಸೆಲ್‌ನಲ್ಲಿದ್ದ ಚಿನ್ನ ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಂಬಿಸಿ, ವಿವಿಧ ಶುಲ್ಕಗಳ ಹೆಸರಿನಲ್ಲಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಆರೋಪಿಗಳ ಸೂಚನೆಯಂತೆ ಮಹಿಳೆ ಹಾಗೂ ಅವರ ಸಂಬಂಧಿಕರ ಫೋನ್ ಪೇ ಖಾತೆಗಳ ಮೂಲಕ ಒಟ್ಟು ರೂ.1,52,000 ಹಣವನ್ನು ವರ್ಗಾವಣೆ ಮಾಡಲಾಗಿದೆ. ಬಳಿಕ ಪಾರ್ಸೆಲ್ ತಡವಾಗಿ ಸ್ವೀಕರಿಸಿರುವ ಕಾರಣ ದಂಡ ಶುಲ್ಕ ಪಾವತಿಸಬೇಕು ಎಂದು ತಿಳಿಸಿ, ಜು.9ರಂದು ಚೆಕ್ ಮೂಲಕ 87,000 ರೂ. ಪಡೆದುಕೊಂಡಿದ್ದಾರೆ.
ಈ ಮೂಲಕ ಆರೋಪಿಗಳು ಕಸ್ಟಮ್ಸ್ ಲಗೇಜ್ ಚಾರ್ಜ್, ಸೀಜ್ಡ್ ಚಾರ್ಜ್ ಹಾಗೂ ಪೆನಾಲ್ಟಿ ಚಾರ್ಜ್ ಎಂಬ ನೆಪಗಳನ್ನು ಹೇಳಿ ಒಟ್ಟು 2,67,000 ರೂ. ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net