

ಬೆಂಗಳೂರು: ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ಮಗಳ ಮನೆಗೆಂದು ಮೈಸೂರಿನಿಂದ ಬಂದ ಮಹಿಳೆ, ಬಸ್ ನಿಲ್ದಾಣದಲ್ಲೇ ದುರ್ಮರಣಕ್ಕೀಡಾದ ಘಟನೆ ಶನಿವಾರ ನಗರದಲ್ಲಿ ಸಂಭವಿಸಿದೆ.
ಮಹಿಳೆಯು ಶನಿವಾರ ಬೆಳಗ್ಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಕೆಂಗೇರಿಯ ಬಸ್ ನಿಲ್ದಾಣದಲ್ಲಿ ಬಸ್ ಇಳಿಯುವಾಗ ಜಾರಿಬಿದ್ದ ಅವರ ಮೇಲೆ ಬಸ್ನ ಚಕ್ರ ಹರಿದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದರು.
ಹಬ್ಬದ ದಿನವೇ ಬಸ್ಗೆ ಮಹಿಳೆ ಬಲಿಯಾದ ದೃಶ್ಯದ ಭೀಕರತೆ ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಮಗಳ ಮನೆಯಲ್ಲಿ ಹಬ್ಬ ಮಾಡಲೆಂದು ಖುಷಿಯಾಗಿ ಬರುತ್ತಿದ್ದ ತಾಯಿ, ಮಗಳನ್ನು ನೋಡುವ ಮೊದಲೇ ದುರಂತ ಅಂತ್ಯಕಂಡಿದ್ದಾರೆ ಎಂದು ಸಹ ಪ್ರಯಾಣಿಕರು ಮಾತನಾಡಿಕೊಳ್ಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.