

ಮೂಡಿಗೆರೆ: ಬಾಳೂರು ಸಮೀಪದ ಚಂದುವಳ್ಳಿ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಭಿಕ್ಷಾ (25) ಮೃತ ದುರ್ದೈವಿ.
ಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮದ ಚನ್ನೇಗೌಡ ಎಂಬುವರ ಪುತ್ರಿ ಸುಭಿಕ್ಷಾ ಅವರನ್ನು 4 ವರ್ಷದ ಹಿಂದೆ ಚಂದುವಳ್ಳಿ ಗ್ರಾಮದ ಪ್ರವೀಣ್‌ಕುಮಾರ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ತವರು ಮನೆಯಿಂದ 2 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಪ್ರವೀಣ್‌ಕುಮಾರ್ ಪೀಡಿಸುತ್ತಿದ್ದ ಎನ್ನಲಾಗಿದೆ. ಗಂಡನ ನಿರಂತರ ಕಿರುಕುಳದಿಂದ ಬೇಸತ್ತ ಸುಭಿಕ್ಷಾ ಸೋಮವಾರ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಹಸೀಲ್ದಾರ್ ರಾಜಶೇಖರ್‌ಮೂರ್ತಿ ಸ್ಥಳ ಪರಿಶೀಲಿಸಿದರು.
ದಂಪತಿಗೆ ಎರಡೂವರೆ ವರ್ಷದ ಗುಂಡು ಮಗುವಿದೆ. ಮೃತಳ ತವರು ಮನೆಯವರು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದು, ಗಂಡ ಪ್ರವೀಣ್, ಅತ್ತೆ ಲಕ್ಷ್ಮೀ, ಮಾವ ಚಂದ್ರೇಗೌಡ ಅವರನ್ನು ಬಾಳೂರು ಪೊಲೀಸರು ಬಂಧಿಸಿದ್ದಾರೆ.