

ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆ ಶುಶ್ರೂಷಕಿಯರ ವಸತಿ ಗೃಹದಲ್ಲಿ ಗುರುವಾರ ರಾತ್ರಿ ಹತ್ಯೆಗೈದ ಸ್ಥಿತಿಯಲ್ಲಿದ್ದ ಪುತ್ರಿ ಮೃತದೇಹದ ಮೇಲೆ ನಿಂತು ಮಹಿಳೆಯೊಬ್ಬರು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೆಗ್ಗಾನ್ ಬೋಧನಾ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ರಾಮಣ್ಣ ಎಂಬುವರ ಪತ್ನಿ ಶ್ರುತಿ(38) ಆತ್ಮಹತ್ಯೆ ಮಾಡಿಕೊಂಡಿದ್ದು, 12 ವರ್ಷದ ಪುತ್ರಿ ಪೂರ್ವಿಕಾ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ರಾಮಣ್ಣ ಅವರು ರಾತ್ರಿ ಪಾಳಿ ಕೆಲಸಕ್ಕೆ ಆಸ್ಪತ್ರೆಗೆ ತೆರಳಿದ್ದರು. ಶುಕ್ರವಾರ ಬೆಳಗ್ಗೆ ಕೆಲಸ ಮುಗಿಸಿಕೊಂಡು ವಾಪಸ್ ಮನೆ ಬಾಗಿಲು ತೆಗೆಯದೆ ಇದ್ದಾಗ ಹಿಂಬಾಗಿಲು ಮುರಿದು ಒಳಪ್ರವೇಶಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಪೂರ್ವಿಕಾಳಿಗೆ ಹರಿತವಾದ ಆಯುಧದಿಂದ ಹೊಡೆದಿದ್ದರಿಂದ ತಲೆ ಚಿಪ್ಪಿನ ಅರ್ಧ ಭಾಗ ಹಾರಿ ಹೋಗಿದೆ. ಮಲಗಿದ್ದ ವೇಳೆ ಕೃತ್ಯ ಎಸಗಿದ್ದು, ಶ್ರುತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಶ್ರುತಿಯ ತಂದೆ, ತಾಯಿ ಸೇರಿ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ ಬಳಿಕ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ತೆರಳಿ ಪರಿಶೀಲಿಸಿದ್ದು, ಶ್ರುತಿ ತಂದೆ ರಂಗಪ್ಪ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮಾನಸಿಕ ಖಿನ್ನತೆ ಕಾರಣ? ದಾವಣಗೆರೆ ಜಿಲ್ಲೆಯ ಮಾಯಕೊಂಡ ತಾಲೂಕಿನ ನರಗನಹಳ್ಳಿ ನಿವಾಸಿ ರಾಮಣ್ಣ ತನ್ನ ಅಕ್ಕನ ಮಗಳು ಶ್ರುತಿಯನ್ನು ಮದುವೆ ಆಗಿದ್ದು, ದಂಪತಿಗೆ ಪೂರ್ವಿಕಾ ಜನಿಸಿದ್ದಳು. ದಂಪತಿ ನಡುವೆ ಸಣ್ಣಪುಟ್ಟ ವಿಚಾರಕ್ಕೂ ಕಲಹಗಳು ನಡೆಯುತ್ತಿದ್ದವು. ಗುರುವಾರ ರಾತ್ರಿ ಕೂಡ ಪೂರ್ವಿಕಾ ತನ್ನ ತಂದೆ ರಾಮಣ್ಣನಿಗೆ ಫೋನ್ ಮಾಡಿ ಅಮ್ಮ(ಶ್ರುತಿ) ಗಲಾಟೆ ಮಾಡುತ್ತಿರುವುದಾಗಿ ಹಾಗೂ ಮನೆಗೆ ಬಂದು ಹೋಗುವಂತೆ ತಿಳಿಸಿದ್ದಳು. ಆದರೆ ರಾತ್ರಿ ಪಾಳಿಯಲ್ಲಿ ಕೆಲಸಕ್ಕಿದ್ದ ಕಾರಣ ರಾಮಣ್ಣ ಮನೆಗೆ ತೆರಳಿರಲಿಲ್ಲ. ಬೆಳಗ್ಗೆ ಕೆಲಸದಿಂದ ಮನೆಗೆ ಬಂದಾಗ ಭೀಕರ ಕೃತ್ಯ ಕಂಡುಬಂದಿದೆ. ಶ್ರುತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ರಾಮಣ್ಣ ಕೆಲಸ ಮುಗಿಸಿಕೊಂಡು ಬರುವಷ್ಟರಲ್ಲೇ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೆಗ್ಗಾನ್ ಆಸ್ಪತ್ರೆಯ ನರ್ಸ್ ಕ್ವಾರ್ಟಸ್‌ನಲ್ಲಿ 12 ವರ್ಷ ವರ್ಷದ ಪೂರ್ವಿಕಾ ತಲೆ ಭಾಗಕ್ಕೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಗಲ್ಲ, ಮುಖದ ಭಾಗಕ್ಕೆ ಗಾಯವಾಗಿದೆ. ಆಕೆಯ ದೇಹದ ಮೇಲೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಶ್ರುತಿ ಮೃತದೇಹ ಸಿಕ್ಕಿದೆ. ಒಂದು ಕೊಲೆ, ಮತ್ತೊಂದು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಶ್ರುತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ. - ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ