

ಕೊಲ್ಹಾರ: ಸೇತುವೆ ಮೇಲಿಂದ ಕೊಲ್ಹಾರ ಬಳಿಯ ಕೃಷ್ಣಾ ನದಿಗೆ ಹಾರಿ ಮಹಿಳೆಯೊಬ್ಬರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೌಸರಬಾನು ಬಾಬುಸಾಬ ಮುಧೋಳ (46) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅಲ್ಲಿ ನೆರೆದಿದ್ದ ಜನರು ಸಹಾಯಕ್ಕಾಗಿ ಸೇತುವೆ ಮೇಲಿಂದ ಹಗ್ಗ ಬಿಟ್ಟು ಬದುಕಿಸಲು ಪ್ರಯತ್ನಪಟ್ಟ ಕಾರ್ಯ ಫಲಿಸಲಿಲ್ಲ. ಮೃತ ಮಹಿಳೆ ಸಿಕ್ಯಾಬ್ ಪ್ರೌಢಶಾಲೆಯಲ್ಲಿ ಅಡುಗೆ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಕೊಲ್ಹಾರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಸೇತುವೆ ಮೇಲೆ ಹೆಚ್ಚುತ್ತಿವೆ ಸಾವಿನ ಸಂಖ್ಯೆ: ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಕುಟುಂಬದಲ್ಲಿ ಆಗುವ ಸಣ್ಣ ಪುಟ್ಟ ಮನಸ್ತಾಪಗಳಿಗೆ ಅಮಾಯಕವಾಗಿ ಜೀವನವನ್ನೇ ಬಲಿಕೊಡುತ್ತಿರುವ ಜನರ ರಕ್ಷಣೆಗಾಗಿ ಅಗ್ನಿಶಾಮಕ ಠಾಣೆ ವ್ಯವಸ್ಥೆ ಆಗಬೇಕಾಗಿದೆ.
ದೂರದ ಬಸವನಬಾಗೇವಾಡಿ ಹಾಗೂ ಬೀಳಗಿ ಪಟ್ಟಣದಿಂದ ವಾಹನಗಳು ಇಲ್ಲಿಗೆ ಬರುವಷ್ಟರಲ್ಲಿ ನದಿಗೆ ಹಾರಿದವರು ಮೃತರಾಗಿರುತ್ತಾರೆ.
ಬಂಧಪಟ್ಟ ಅಧಿಕಾರಿಗಳು ಕೂಡಲೇ ಕೊಲ್ಹಾರ ತಾಲೂಕು ಕೇಂದ್ರಕ್ಕೆ ಅಗ್ನಿ ಶಾಮಕ ಠಾಣೆ ಮಂಜೂರು ಮಾಡಿಸಿಕೊಡಬೇಕು ಎಂಬುದು ರೈತ ಮುಖಂಡ ರಮೇಶ ಬಾಲಗೊಂಡ, ಕರವೇ ಮುಖಂಡ ರವಿ ಗೊಳಸಂಗಿ ಆಗ್ರಹಿಸಿದ್ದಾರೆ.