

ಮಂಗಳೂರು: ವಿದೇಶಿ ಪೌಂಡ್ಸ್ ಗಳನ್ನು ನೀಡುವುದಾಗಿ ಮಹಿಳೆಯೊಬ್ಬರಿಗೆ ನಂಬಿಸಿ ಆನ್ ಲೈನ್ ಮೂಲಕ 79,19,850 ರೂ. ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಮಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಒಬ್ಬಾಕೆ ದುಬಾಯಿಯಲ್ಲಿ ನೆಲೆಸಿದ್ದಾಳೆ. ಆಕೆಯ ಮನೆ ಕೆಲಸಕ್ಕೆಂದು ಕಳುಹಿಸಲು ವಾಮಂಜೂರಿನ ಮಹಿಳೆಯೊಬ್ಬರನ್ನು ತನ್ನ ಮನೆಗೆ ಕರೆಸಿಕೊಂಡಿದ್ದರು. ಆಕೆ ಫೇಸ್ ಬುಕ್ ನಲ್ಲಿ ಯು.ಕೆ (ಲಂಡನ್) ಮೂಲದ ಅಪರಿಚಿತ ವ್ಯಕ್ತಿ ಮ್ಯಾಕ್ಸ್ ಅಲೆಂಗ್ಸಾಂಡರ್ ಎಂಬಾತನೊಂದಿಗೆ ಸಂಪರ್ಕದಲ್ಲಿದ್ದಳು.
ಆ ಅಪರಿಚಿತ ವ್ಯಕ್ತಿಯು ಭಾರತಕ್ಕೆ ಬರುವುದಾಗಿಯೂ ಹಾಗೂ ವಿದೇಶಿ ಪೌಂಡ್ಸ್ ಹಣ ತರುವುದಾಗಿಯೂ ಆ ಮಹಿಳೆಗೆ ತಿಳಿಸಿದ್ದಾನೆ. ಅನಂತರ ತನ್ನನ್ನು ಹೊಸ ದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮಹಿಳೆಗೆ ತಿಳಿಸಿದ್ದು, ಹಣ ಕಳುಹಿಸುವಂತೆ ಕೇಳಿ ಕೊಂಡಾಗ ಮಹಿಳೆ ಆ ವ್ಯಕ್ತಿಗೆ ಹಣ ಸಹಾಯ ಮಾಡಿದ್ದಾಳೆ. ಇದಾದ ಕೆಲವು ದಿನಗಳ ಬಳಿಕ ಮಹಿಳೆಯು ದುಬಾಯಿಗೆ ದೂರುದಾರ ಮಗಳ ಮನೆಗೆ ಹೋಗಿದ್ದಾಳೆ.
ಈ ನಡುವೆ ದೂರುದಾರ ಮಹಿಳೆಯೂ ಅಪರಿಚಿತ ವ್ಯಕ್ತಿಯೊಂದಿಗೆ ವಾಟ್ಸ್ ಪ್ ಮೂಲಕ ಸಂಪರ್ಕದಿಂದಿದ್ದರು. ಅಪರಿಚಿತ ವ್ಯಕ್ತಿ ಹೆಚ್ಚಿನ ವಿದೇಶಿ ಪೌಂಡ್ಸ್ ಗಳನ್ನು ನೀಡುವುದಾಗಿ ತಿಳಿಸಿ ಮನೆಯ ವಿಳಾಸವನ್ನು ಪಡೆದುಕೊಂಡು ಭೇಟಿ ನೀಡುವುದಾಗಿ ತಿಳಿಸಿದ್ದಾನೆ. ಇದಾದ ಬಳಿಕ ಆಗಸ್ಟ್ ತಿಂಗಳ 21ರಂದು ನೀಗ್ರೋ ವ್ಯಕ್ತಿಯೊಬ್ಬ ಅವರ ಮನೆಗೆ ಬಂದಿದ್ದಾನೆ. ಆತ ತನ್ನ ಹೆಸರು ಸ್ಟೀವ್ ಎಂದು ಪರಿಚಯಿಸಿಕೊಂಡು, ಬಾಕ್ಸ್ ಕೊಟ್ಟಿದ್ದು, ಅದರಲ್ಲಿ ವಿದೇಶಿ ಡಾಲರ್ ಗಳು ಇರುವುದನ್ನು ತೋರಿಸಿದ್ದಾನೆ. ಇದನ್ನು ನೋಡಿದ ದೂರುದಾರರು ಸತ್ಯವೆಂದು ನಂಬಿದ್ದಾರೆ. ಅದರ ಹಣವನ್ನು ಪಾವತಿಸುವಂತೆ ತಿಳಿಸಿ ಆತ ತೆರಳಿದ್ದಾನೆ.
ಇದೆಲ್ಲ ಸತ್ಯವೆಂದೇ ನಂಬಿದ ದೂರುದಾರ ಮಹಿಳೆ, ಈ ವಿಚಾರವನ್ನು ತನ್ನ ಪರಿಚಯದ ನೀರುಮಾರ್ಗ ಮೂಲದ ಮಹಿಳೆಯೊಬ್ಬರಿಗೆ ತಿಳಿಸಿದ್ದಾರೆ. ಆಕೆ ತನಗೂ ವಿದೇಶಿ ಪೌಂಡ್ಸ್ ಸಿಗಬಹುದು ಎನ್ನುವ ಆಸೆಯಿಂದ 25 ಲಕ್ಷ ರೂ. ವನ್ನು ದೂರುದಾರರಿಗೆ ವರ್ಗಾಯಿಸಿದ್ದಾರೆ. ಇನ್ನೊಬ್ಬ ಮಹಿಳೆಯೂ 2 ಲಕ್ಷ ರೂ. ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ದೂರುದಾರಿಂದ ಚೆಕ್ ಕೂಡಾ ಪಡೆದಿದ್ದಾರೆ. ತನ್ನಲ್ಲಿರುವ ಹಣವನ್ನೂ ಸೇರಿಸಿ ಅಪರಿಚಿತ ವ್ಯಕ್ತಿಗೆ ಒಟ್ಟು 79,19,850 ರೂ. ವನ್ನು ವಿವಿಧ ಬ್ಯಾಂಕ್ ಖಾತೆಗಳಿಂದ ವರ್ಗಾಯಿಸಿದ್ದಾರೆ. ಆದೆ ಅಪರಿಚಿತ ವ್ಯಕ್ತಿ ಇನ್ನೂ ಹೆಚ್ಚಿನ ಹಣವನ್ನು ವರ್ಗಾಯಿಸುವಂತೆ ಒತ್ತಾಯಿಸಿದ್ದು, ಅನುಮಾನ ಬಂದು ಮಕ್ಕಳಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದು ಬಂದಿದೆ.
ನಂತರದ ದಿನಗಳಲ್ಲಿ ಸದ್ರಿ ಅಪರಿಚಿತ ವ್ಯಕ್ತಿ ಇನ್ನೂ ಹೆಚ್ಚಿನ ಹಣ ವರ್ಗಾಯಿಸುವಂತೆ ದೂರುದಾರರನ್ನು ಒತ್ತಾಯಿಸಿದಾಗ ಅನುಮಾನ ಬಂದು ತನ್ನ ಮಕ್ಕಳಲ್ಲಿ ವಿಚಾರಿಸಿದಾಗ ಮೋಸ ಹೋಗಿರುವ ವಿಚಾರ ತಿಳಿದಿರುತ್ತದೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಆನ್ ಲೈನ್ ವಿದೇಶಿ ಪೌಂಡ್ಸ್ ಗಳನ್ನು ನೀಡುವುದಾಗಿ ನಂಬಿಸಿ ಆನ್ ಲೈನ್ ಮುಖಾಂತರ ಒಟ್ಟು 79,19,850/- ರೂ ಗಳನ್ನು ವರ್ಗಾಯಿಸಿಕೊಂಡು ಆನ್ ಲೈನ್ ಮೋಸ ವಂಚನೆ ಮಾಡಿದ್ದು, ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.